ಶಿಕ್ಷಣ

ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಶಿವಾಜಿ ಜಯಂತಿ | ಶಿವಾಜಿ ಮಹಾರಾಜರ ಜೀವನ ಸಾಧನೆಗಳು ಪ್ರೇರಣಾದಾಯಿ: ರಾಕೇಶ್ ಕಮ್ಮಜೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶಿವಾಜಿ ಮಹಾರಾಜರು ಜನಿಸಿ 396 ವರ್ಷಗಳಾದರೂ ಅವರ ಜೀವನ ಸಾಧನೆಗಳು ಇಂದಿಗೂ ಪ್ರೇರಣೆಯಾಗಿ ಉಳಿದಿವೆ. ಹುಟ್ಟಿನ ಸಂದರ್ಭದಲ್ಲಿ ತನ್ನದಾದ ಒಂದಿಂಚು ಭೂಮಿ ಇಲ್ಲದಿದ್ದರೂ ಗತಿಸುವ ವೇಳೆಗೆ ಅವರು ನಿರ್ಮಿಸಿ ಹೋದ ಮರಾಠ ಸಾಮ್ರಾಜ್ಯ ಅವರ ಜೀವನ ಸಾಧನೆಗೆ ಹಿಡಿದ ಕೈಗನ್ನಡಿ ಎಂದು ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಒಂದೆಡೆಯಿದ ಆದಿಲ್‌ಶಾಹಿಗಳು ಹಾಗೂ ಇನ್ನೊಂದೆಡೆಯಿಂದ ಮೊಘಲರನ್ನು ಎದುರಿಸುತ್ತಾ ತನ್ನ ಸಾಮ್ರಾಜ್ಯವನ್ನು ಕಟ್ಟಿದವರು ಶಿವಾಜಿ. ಕೋಟಿ ಸಂಖ್ಯೆಯಲ್ಲಿದ್ದ ಮೊಘಲರನ್ನು ಹಲವು ಬಾರಿ ಹಿಮ್ಮೆಟ್ಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಾಯಿ ಜೀಜಾಬಾಯಿ ಒಡಮೂಡಿಸಿದ ರಾಷ್ಟ್ರಭಕ್ತಿ, ಧರ್ಮಪ್ರಜ್ಞೆ ಹಾಗೂ ಸಂಸ್ಕಾರಗಳು ಶಿವಾಜಿ ಮಹಾರಾಜರನ್ನು ಮಹಾನ್ ನಾಯಕನನ್ನಾಗಿಸಿತು. ಶಿವಾಜಿಯವರ ಪರಾಕ್ರಮದಿಂದಲಾಗಿ ಸರಿಸುಮಾರು ಮುನ್ನೂರು ಕೋಟೆಗಳ ಮೇಲೆ ಸನಾತನ ಧರ್ಮಧ್ವಜ ಹಾರಾಡುವಂತಾಯಿತು ಎಂದು ನುಡಿದರು.

ಪ್ರತಿಯೊಬ್ಬರೂ ದಿನಕ್ಕೆ ಭಗವದ್ಗೀತೆಯ ಕನಿಷ್ಟ ಒಂದು ಶ್ಲೋಕವನ್ನು ವಾಚಿಸಿ ಅರ್ಥಸಹಿತ ತಿಳಿದುಕೊಂಡರೆ ಎರಡು ವರ್ಷದಲ್ಲಿ ಇಡೀ ಭಗವದ್ಗೀತೆಯನ್ನು ಮನನ ಮಾಡಿದಂತಾಗುತ್ತದೆ. ಸಣ್ಣ ಮಕ್ಕಳು ಹೆತ್ತವರಲ್ಲಿ ದಿವಸಕ್ಕೊಂದರಂತೆ ಅರ್ಥ ಸಹಿತವಾಗಿ ಶ್ಲೋಕವನ್ನು ಹೇಳಿಕೊಡುವಂತೆ ಒತ್ತಾಯಿಸಬೇಕು. ಆಗ ಹೆತ್ತವರು ಮತ್ತು ಮಕ್ಕಳಿಬ್ಬರೂ ಭಗವದ್ಗೀತೆ ಅಧ್ಯಯನ ನಡೆಸಿದಂತಾಗುತ್ತದೆ. ನಿರಂತರ ಪಠಣ ಶ್ರವಣದಿಂದ ಮನುಷ್ಯರ ಮಕ್ಕಳಾಗಿ ಹುಟ್ಟಿದ ನಾವು ದೇವರ ಮಕ್ಕಳಾಗಿ ಬೆಳೆಯುತ್ತೇವೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ, ದೇಹದ ಶಕ್ತಿಯೊಂದಿಗೆ ಮಾನಸಿಕ ಶಕ್ತಿಯನ್ನೂ ಬೆಳೆಸಿಕೊಳ್ಳಬೇಕು. ಸಮಸ್ಯೆ ಬಂದಾಗ ಮಾತ್ರ ಕೆಲಸ ಮಾಡುತ್ತೇನೆ ಎಂಬ ಮನೋಭಾವ ಬಿಟ್ಟು ಕಾರ್ಯತತ್ಪರರಾಗಬೇಕು. ಪ್ರತಿಯೊಬ್ಬರೂ ತಮ್ಮೊಳಗಿನ ಶಕ್ತಿಯನ್ನು ರಾಷ್ಟ್ರಸೇವೆಗೆ ಬಳಸಬೇಕು. ಇಲ್ಲದಿರುವುದರ ವಿಷಯದ ಬಗೆಗೆ ಗಮನ ಹರಿಸದೆ ಇರುವುದನ್ನೇ ಮೆಟ್ಟಿಲಿನಂತೆ ಉಪಯೋಗಿಸಿಕೊಂಡು ಮೇಲಕ್ಕೇರುವುದೇ ನಿಜವಾದ ಸಾಧಕನ ಜಾಣ್ಮೆ ಎಂದು ತಿಳಿಸಿದರು.

ಸಂಸ್ಥೆಯ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಶಿವಾಜಿ ಮಹಾರಾಜರ ಜೀವನಾಧಾರಿತ ರೂಪಕ ಪ್ರದರ್ಶನಗೊಂಡಿತು. ಶಿವಾಜಿ ಮಹಾರಾಜರ ಕುರಿತು ಸನ್ಮಯ್ ಗಾಯನ ಪ್ರಸ್ತುತಪಡಿಸಿದರು. ಅವ್ಯಾನ್ ಶಂಗ್ರಿತ್ತಾಯ ಹಾಗೂ ಮಯೂರ್ ಎಸ್. ಮಯ್ಯ ಅವರು ಶಿವಾಜಿ ಮಹಾರಾಜರ ಕುರಿತು ಭಾಷಣ ಮಾಡಿದರು.

ವಿದ್ಯಾರ್ಥಿಗಳಾದ ವಸಿಷ್ಟ ಸ್ವಾಗತಿಸಿ, ಹರ್ಷಲ್ ಡಿ. ರೈ ವಂದಿಸಿದರು. ವಿದ್ಯಾರ್ಥಿನಿ ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಅಂಬಿಕಾದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ | ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು…

ಸಿಬಿಎಸ್ಇ 10ನೇ ತರಗತಿ: ಮೊದಲ ಬೋರ್ಡ್ ಪರೀಕ್ಷೆಗೆ ಕಡ್ಡಾಯ ಹಾಜರಾತಿ! ಗೈರುಹಾಜರಾದರೆ ‘ಎಸೆನ್ಷಿಯಲ್ ರಿಪೀಟ್’

ನವದೆಹಲಿ:ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳಿಗೆ 2026ನೇ ಸಾಲಿನಿಂದ ಜಾರಿಯಾಗುತ್ತಿರುವ ಎರಡು…

ಕೈಕಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ: ಎರಡು ದಿನಗಳ ಐತಿಹಾಸಿಕ ಸಂಭ್ರಮಕ್ಕೆ ಭರ್ಜರಿ ಸಿದ್ಧತೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಕೈಕಾರ ಸರ್ಕಾರಿ ಹಿರಿಯ…