ಮಂಗಳೂರು: ಸಮುದ್ರದಲ್ಲಿನ ತುರ್ತು ಅವಘಡಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಮಂಗಳೂರಿನ ಉಳ್ಳಾಲ ಮೀನುಗಾರರು ರಾಜ್ಯದ ಮೊದಲ ಬೋಟ್ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದಾರೆ.
ಸರ್ಕಾರದ ನೆರವಿಗಾಗಿ ಕಾಯದೆ, ಮೀನುಗಾರರೇ ಮುಂದಾಗಿ ಸುಮಾರು 16 ಲಕ್ಷ ರೂ ವೆಚ್ಚದಲ್ಲಿ ಈ ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿದ್ದಾರೆ.
ಉಳ್ಳಾಲ ಜೆಟ್ಟಿಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುವ ಈ ಬೋಟ್‌ನಲ್ಲಿ ಸೈರನ್, ಎಮರ್ಜೆನ್ಸಿ ದೀಪ, ಸ್ಟ್ರೆಚರ್, ಆಮ್ಲಜನಕ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಕಿಟ್, ವೈದ್ಯಕೀಯ ಉಪಕರಣಗಳು ಹಾಗೂ ಲೈಫ್ ಜಾಕೆಟ್‌ಗಳು ಲಭ್ಯವಿವೆ. ನುರಿತ ಚಾಲಕರು ಮತ್ತು ಆರೋಗ್ಯ ಸಿಬ್ಬಂದಿಯ ತಂಡ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ.
ಈ ಮಾನವೀಯ ಪ್ರಯತ್ನವು ಕರಾವಳಿಯ ಮೀನುಗಾರರ ಜೀವ ರಕ್ಷಣೆಗೆ ಭದ್ರತೆ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.





















