ಮಂಗಳೂರು: ಸೆಂಟ್ರಲ್ ಅರೆಕಾನಟ್ ಅಂಡ್ ಕೊಕ್ಕೋ ಮಾರ್ಕೆಟಿಂಗ್ ಅಂಡ್ ಪ್ರೋಸೆಸ್ಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ), ಮಂಗಳೂರು – ಇದರ 2025-2030ರ ಅವಧಿಗೆ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಸ್. ಆರ್. ಸತೀಶ್ಚಂದ್ರ ನೂತನ ಅಧ್ಯಕ್ಷರಾಗಿ ಹಾಗೂ ಪದ್ಮರಾಜ್ ಪಟ್ಟಾಜೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಚುನಾವಣಾ ಫಲಿತಾಂಶ ನವದೆಹಲಿಯ ಸಹಕಾರ ಸಚಿವಾಲಯದ ಅಡಿಯಲ್ಲಿ ಬರುವ ‘ಸಹಕಾರಿ ಚುನಾವಣಾ ಪ್ರಾಧಿಕಾರ’ದ ಅಧಿಕೃತ ಅನುಮೋದನೆ ಇನ್ನಷ್ಟೆ ಬರಬೇಕಿದೆ.
ಎಸ್.ಆರ್. ಸತೀಶ್ಚಂದ್ರ ಪರಿಚಯ:
ಈ ಹಿಂದೆಯೂ ಅಧ್ಯಕ್ಷರಾಗಿದ್ದ ಎಸ್.ಆರ್. ಸತೀಶ್ಚಂದ್ರ ಅವರು ಇದೀಗ ಮತ್ತೊಂದು ಅವಧಿಗೆ ಕ್ಯಾಂಪ್ಕೋ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದವರಾದ ಎಸ್. ಆರ್. ಸತೀಶ್ಚಂದ್ರ ಅವರು ಸಹಕಾರಿ ಕ್ಷೇತ್ರದಲ್ಲಿ ಹಿರಿಯ ಚೇತನವಾಗಿದ್ದು, ಕಳೆದ ಎರಡೂವರೆ ದಶಕಗಳಿಗೂ ಹೆಚ್ಚು ಕಾಲದ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಇವರು 2015-2020ರ ಅವಧಿಯಲ್ಲಿ ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದು, ನಿರ್ಗಮಿತ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ:
ಕಾಸರಗೋಡಿನ ಪಟ್ಟಾಜೆ-ಬದಿಯಡ್ಕ ಮೂಲದ ಪ್ರಗತಿಪರ ಕೃಷಿಕರಾದ ಪದ್ಮರಾಜ್ ಪಟ್ಟಾಜೆ ಅವರು ದರ‍್ಘಕಾಲದಿಂದ ಸಹಕಾರಿ ಆಂದೊಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಸತತ ಎರಡು ಅವಧಿಗೆ ಕ್ಯಾಂಪ್ಕೊ ಸಂಸ್ಥೆಯ ನರ‍್ದೇಶಕರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಸಾಲಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ಇತರ ವಿವಿಧ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿಯೂ ಮಹತ್ತರ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.






















