ಪುತ್ತೂರು: ತನ್ನ ವಿರುದ್ಧದ ದುಷ್ಟಕೂಟದಿಂದ ಸುಪಾರಿ ಪಡೆದುಕೊಂಡು ಆರ್.ಸಿ. ನಾರಾಯಣ್ ಹೇಳಿಕೆ ನೀಡಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ತಿರುಗೇಟು ನೀಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳ ಬಗ್ಗೆ ಬರೆದುಕೊಂಡು ಬಂದು ಓದಿ ಹೇಳುವ ಆರ್.ಸಿ. ನಾರಾಯಣ್ ಅವರು ಗುರುಗಳ ತತ್ವಾದರ್ಶಗಳ ಬಗ್ಗೆ ಮೊದಲು ತಿಳಿದುಕೊಳ್ಳಲಿ. ಬೇಕಿದ್ದರೆ ಪುಸ್ತಕ ತಾನೇ ಕಳುಹಿಸಿ ಕೊಡುತ್ತೇನೆ. ತನ್ನನ್ನು ಸ್ವಯಂಘೋಷಿತ ನಾಯಕ ಎಂದು ಹೇಳಿಕೊಳ್ಳುವವರು ಒಂದು ಚುನಾವಣೆಯಾದರೂ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಬಿಲ್ಲವ ಸಮುದಾಯವನ್ನು ತನ್ನ ವಿರುದ್ಧ ಎತ್ತಿ ಕಟ್ಟುವ ಯತ್ನವಿದು. ನಿಮ್ಮ ಸಿದ್ಧಾಂತ ಯಾವುದು ಎಂದು ಕೇಳಿದೆನೆ ಹೊರತು, ನಾರಾಯಣ ಗುರುಗಳನ್ನು ಅವಮಾನಿಸಿಲ್ಲ. ಒಂದು ವೇಳೆ ನಾರಾಯಣ ಗುರುಗಳಿಗೆ ಅವಮಾನವಾಗಿದ್ದೇ ನಿಜವಾಗಿದ್ದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದರು.
ಬಿಜೆಪಿ ಹಾಗೂ ನಾರಾಯಣ ಗುರುಗಳ ಸಿದ್ಧಾಂತಕ್ಕೆ ಸಾಮ್ಯತೆ ಇದೆ ಎನ್ನುತ್ತಾರೆ. ಅದು ಹೇಗೆ? ನಾರಾಯಣ ಗುರುಗಳು ಮನುಸ್ಮೃತಿ ವಿರುದ್ಧ ಹೋರಾಟ ಮಾಡಿದರು. ಆದ್ದರಿಂದ ಇಂದು ಕೂಡ ಕೇರಳದಲ್ಲಿ ಬಿಜೆಪಿ ಅಧಿಕಾರ ಪಡೆದಿಲ್ಲ. ಬಿಜೆಪಿ ನಾರಾಯಣ ಗುರುಗಳಿಗೆ ಅವಮಾನ ಮಾಡುತ್ತಾ ಬಂದಿದೆ. ರಾಜ್ಯ ಸರಕಾರ ಗಣರಾಜ್ಯೋತ್ಸವಕ್ಕೆ ನಾರಾಯಣ ಗುರುಗಳ ಸ್ಟಾಚ್ಯು ಕಳುಹಿಸಿಕೊಟ್ಟಾಗ ತಿರಸ್ಕರಿಸಿದೆ. ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದ ನಾರಾಯಣಗುರ ಹೆಸರನ್ನು ನಿಲ್ದಾಣಕ್ಕೆ ಇಡಬೇಕೆಂಬ ಒತ್ತಾಸೆಗೆ ಇನ್ನೂ ಸ್ಪಂದನೆಯೇ ಸಿಕ್ಕಿಲ್ಲ ಎಂದರು.
ಪುತ್ತೂರಿನ ಪಡೀಲಿನಲ್ಲಿ ಜನಾರ್ದನ ಪೂಜಾರಿ ಅವರಿಗೆ ಚೂರಿ ಇರಿತ ಆಗಿತ್ತು. ಅದಕ್ಕೆ ಕುಮ್ಮಕ್ಕು ನೀಡಿದ್ದೇ ಬಿಜೆಪಿ. ಇದೀಗ ಧರ್ಮಸ್ಥಳದ ಕುರಿತಾಗಿ ಜನಾರ್ದನ ಪೂಜಾರಿ ಅವರ ಹಿಂದೆ ಬಿಜೆಪಿ ಹಾಗೂ ಹರಿಕೃಷ್ಣ ಬಂಟ್ವಾಳ್ ಇದ್ದಾರೆ ಎಂದರು.