ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ನಿವೃತ್ತ ಅಧಿಕಾರಿ ಇಬ್ರಾಹಿಂ ಅವರ ಸಹೋದರ ಆಲಿ ಅವರು ಅಕ್ರಮ ಪೆಟ್ರೋಲ್ ಪಂಪ್ ನಡೆಸುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಮ್ಮರ್ ಫಾರೂಕ್ ಆಗ್ರಹಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಟ್ಯಾಡಿಯಲ್ಲಿರುವ ಅಡೂರು ಫ್ಯೂಲ್ಸ್ (ನಯಾರಾ ಎನರ್ಜಿ) ಅಧಿಕೃತ ಮಾನದಂಡಗಳನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರರು, ತಾಪಂ ಇಓ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್, ಕೇರಳ ಸರಕಾರದ ಪಿಡಬ್ಲ್ಯೂಡಿ ಇಲಾಖೆ, ಆರೋಗ್ಯ ಇಲಾಖೆ, ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಪುತ್ತೂರು ಶಾಸಕರಿಗೆ ದೂರು ನೀಡಲಾಗಿದೆ. ಈ ಹಿಂದೆ ಪೆಟ್ರೋಲ್ ಪಂಪಿಗೆ ಗ್ರಾಪಂ ಅನುಮತಿ ನೀಡಿದ್ದು, ಇದೀಗ ಪೆಟ್ರೋಲ್ ಪಂಪಿನ ಅನಧಿಕೃತ ವ್ಯವಹಾರಗಳನ್ನು ಗಮನಿಸಿ ಅನುಮತಿ ನವೀಕರಣ ಮಾಡಿಲ್ಲ ಎನ್ನುವುದನ್ನು ಮಾಹಿತಿ ಹಕ್ಕಿನಿಂದ ತಿಳಿದುಕೊಂಡಿದ್ದೇವೆ ಎಂದರು.
ಈ ಪೆಟ್ರೋಲ್ ಪಂಪಿನ ದಾಸ್ತಾನು ಟ್ಯಾಂಕ್ ಸೋರಿಕೆ ಆಗುತ್ತಿದೆ ಎಂಬ ಮಾಹಿತಿ ಇದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಸಮಯದಲ್ಲಿ ತೊಂದರೆ ಎದುರಾಗಬಹುದು. ಇದರ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲು ಮನವಿಯಲ್ಲಿ ಒತ್ತಾಯಿಸಿದ್ದೇವೆ. ಅಲ್ಲದೇ, ಪೆಟ್ರೋಲ್ ಪಂಪ್ ಮುಂಭಾಗದ ರಸ್ತೆ ಪಿಡಬ್ಲ್ಯೂಡಿಗೆ ಸೇರಿದ್ದು. ಪಂಪ್ ಮುಂಭಾಗ ಚರಂಡಿ ನಿರ್ಮಿಸದೇ ಇಂಟರ್ ಲಾಕ್ ಅಳವಡಿಸಿದ್ದು, ಇಂಟರ್ ಲಾಕನ್ನು ತೆರವು ಮಾಡುವಂತೆ ಕೇರಳ ಸರಕಾರದ ಪಿಡಬ್ಲ್ಯೂಡಿ ಇಲಾಖೆ ಸೂಚನೆ ನೀಡಿದೆ ಎಂದು ವಿವರಿಸಿದರು.
ಪೆಟ್ರೋಲ್ ಪಂಪ್ ಗೆ ಹಿಂದಿನ ಆಡಳಿತದ ಸಂದರ್ಭದಲ್ಲಿ ಅನುಮತಿ ನೀಡಲಾಗಿತ್ತು. ಆದರೆ ಇದೀಗ ಪರವಾನಿಗೆಯನ್ನು ನವೀಕರಿಸದೇ ಬಾಕಿ ಉಳಿಸಿಕೊಂಡಿದೆ. ಸರಕಾರದ ನಿಯಮಾವಳಿಯಂತೆ 40 ಮೀಟರ್ ನಷ್ಟು ರೋಡ್ ಮಾರ್ಜಿನ್ ಬಿಟ್ಟಿರಬೇಕು. ಆದರೆ ಈ ಅಡೂರು ಫ್ಯೂಲ್ಸ್ 20 ಮೀಟರ್ ಕೂಡ ರೋಡ್ ಮಾರ್ಜಿನ್ ಬಿಟ್ಟಿಲ್ಲ. ಅಲ್ಲದೇ, ಪೆಟ್ರೋಲ್ ಪಂಪ್ ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿದ್ದು, ಅನಿಲ ಸೋರಿಕೆಯಾದಲ್ಲಿ ಇದರಿಂದ ಸಾರ್ವಜನಿಕರಿಗೆ ಜೀವ ಹಾನಿ ಆಗುವ ಸಂಭವ ಇದೆ ಎಂದು ತಿಳಿಸಿದರು.
ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಎಲ್ಲಾ ವಿರೋಧಗಳನ್ನು ಲೆಕ್ಕಿಸದೇ ಪರವಾನಿಗೆ ನವೀಕರಿಸಲು ಮುಂದಾದರೆ, ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಹಮೀದ್, ಸೂಫಿ ಇಮ್ತಿಯಾಜ್, ಅಬ್ದುಲ್ ಜವಾದ್, ಹಬೀಬ್ ರಹಿಮಾನ್, ಹಬೀಬ್, ಮುತ್ತಲಿಬ್, ಸಾಧಿಕ್, ಶಮೀಮ್, ಶಹಾಬ್ ನೈಯಡ್ಕ ಉಪಸ್ಥಿತರಿದ್ದರು.