ಕಂಬಳದ ಉದ್ಘೋಷಕರಾಗಿ ತಮ್ಮ ಕಂಚಿನ ಕಂಠದಿಂದಲೇ ಗುರುತಿಸಿಕೊಂಡಿದ್ದ ಭೂ ನ್ಯಾಯ ಮಂಡಳಿ ಸದಸ್ಯ, ಕೋಡಿಂಬಾಡಿ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬುಧವಾರ ಬೆಳಿಗ್ಗೆ ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದ ಭೂ ನ್ಯಾಯ ಮಂಡಳಿಯ ಕೋರ್ಟ್ ಕಲಾಪಕ್ಕೆ ಆಗಮಿಸಿದ್ದ ನಿರಂಜನ್ ರೈ ಅವರು, ಅಲ್ಲಿಯೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಕೊನೆಯುಸಿರೆಳೆದಿದ್ದರು.
ಪುತ್ತೂರು ಕೋಟಿ – ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿರಂಜನ್ ರೈ ಅವರು ಕಂಬಳ ಕ್ರೀಡೆಯ ಓಟಗಾರರು ಹಾಗೂ ಕಂಬಳದ ನಿರೂಪಣೆಯನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಬನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾಗಿರುವ ಅವರು, ಬಂಟರ ಸಂಘದಲ್ಲಿಯೂ ಅವರು ಸಕ್ರೀಯರಾಗಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.






















