ಹಣಕ್ಕಾಗಿ ತಾಯಿಯ ಶವ ಹೂಳಲು ಅವಕಾಶ ನೀಡದಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದ ದೊಡ್ಡಕುರುಗೂಡು ಗ್ರಾಮದಲ್ಲಿ ನಡೆದಿದೆ.
ವಯೋಸಹಜ ಖಾಯಿಲೆಯಿಂದ ಅನಂತಕ್ಕ ಎಂಬ ಮಹಿಳೆ ಮೃತಪಟ್ಟಿದ್ದರು. ಆದ್ರೆ ಆರು ಜನ ಮಕ್ಕಳಿದ್ದರೂ ಕೂಡ ಹಣಕ್ಕಾಗಿ ಕಚ್ಚಾಡಿಕೊಂಡು ಶವವನ್ನು ಇಡೀ ರಾತ್ರಿ ಪೊಲೀಸ್ ಠಾಣೆ ಮುಂದೆ ಇರಿಸಿದ ಘಟನೆ ನಡೆದಿದೆ.
ಅನಂತಕ್ಕ ಅವರಿಗೆ 6 ಮಕ್ಕಳಿದ್ದರೆ ಕೆಐಡಿಬಿಗೆ ಸೇರಿದ ಜಮೀನಿನಿಂದ 93,75,000 ರೂಪಾಯಿ ಹಣ ಅಜ್ಜಿ ಅನಂತಕ್ಕ ಅವರ ಖಾತೆಗೆ ಬಂದಿತ್ತು ಈ ಹಣಕ್ಕಾಗಿಯೇ ಮಕ್ಕಳು ಕಿತ್ತಾಡಿಕೊಂಡಿದ್ದಾರೆ.
ಕೆಐಡಿಬಿಯಿಂದ ಬಂದ ಹಣವನ್ನು ಗಂಡು ಮಕ್ಕಳು ಮಾತ್ರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ರು. ಆದ್ರೆ ಕೋರ್ಟ್ ಹೆಣ್ಣು ಮಕ್ಕಳಿಗೆ 40 ಲಕ್ಷ ಹಣ ನೀಡುವಂತೆ ತೀರ್ಪು ನೀಡಿತ್ತು. ಹಾಗಾಗಿ ಆ ಹಣವನ್ನು ನೀಡಿದ್ರೆ ಮಾತ್ರ ಶವವನ್ನು ಕೊಡುವುದಾಗಿ ಗಂಡು ಮಕ್ಕಳು ತೀವ್ರ ವಿರೋಧ ಮಾಡಿದ್ದಾರೆ.
ಕಳೆದ ರಾತ್ರಿ ಪೂರ್ತಿ ಪೊಲೀಸ್ ಠಾಣೆ ಮುಂಭಾಗ ಶವ ಇಟ್ಟು ಕೇಸ್ ದಾಖಲಿಸುವಂತೆ ಹೆಣ್ಣುಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ರಾತ್ರಿ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಶವ ಇಟ್ಟು ಅಮಾನವೀಯವಾಗಿ ವರ್ತನೆ ತೋರಿದ್ದಾರೆ. ಇದಾದ ಬಳಿಕ ತಹಶೀಲ್ದಾರ್ ಸ್ಥಳಕ್ಕೆ ಬಂದು ಸಮಸ್ಯೆ ಮುಕ್ತಿ ಕಲ್ಪಿಸುವ ಭರವಸೆ ನೀಡಿದ್ದಾರೆ.
ಘಟನೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜರುಗಿದೆ.