ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್ ಒಪ್ಪಂದ ಉಲ್ಲಂಘನೆ ಮತ್ತು ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಜುಸ್ ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಬೈಜು ರವೀಂದ್ರನ್ ಅವರು ತಮ್ಮ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 2024 ರಿಂದ ನ್ಯಾಯಾಲಯ ನೀಡಿದ್ದ ಹಲವಾರು ಆದೇಶಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ. ನ್ಯಾಯಾಲಯದ ನಿಯಮಗಳನ್ನು ಪಾಲಿಸಲು ಸಂಪೂರ್ಣವಾಗಿ ವಿಫಲರಾದ ಕಾರಣಕ್ಕಾಗಿ ಅವರಿಗೆ ಸಿಂಗಾಪು ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ರವೀಂದ್ರನ್ ಅವರು ಯಾವುದೇ ನೆಪ ಹೇಳದೆ ತಕ್ಷಣವೇ ಸಿಂಗಾಪುರದ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗಬೇಕು. ಕಾನೂನು ವೆಚ್ಚಗಳಿಗಾಗಿ ಸುಮಾರು 90,000 ಸಿಂಗಾಪುರ ಡಾಲರ್(67.47 ಲಕ್ಷರೂ.) ಪಾವತಿಸುವಂತೆ ಕೋರ್ಟ್ ಸೂಚಿಸಿದೆ.
ಹೂಡಿಕೆದಾರರ ಹಣವನ್ನು ದುರುಪಯೋಗ ಪಡಿಸಿಕೊಂಡು, ಆಸ್ತಿ ವಿವರಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯಗಳಿಂದ ಮುಚ್ಚಿಡಲು ಪ್ರಯತ್ನಿಸಿದ್ದಕ್ಕೆ ಬೈಜು ರವೀಂದ್ರನ್ ಅವರಿಗೆ ಈ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ವಿದೇಶಿ ಹೂಡಿಕೆದಾರರಿಂದ ಕಾನೂನು ಹೋರಾಟ ಎದುರಿಸುತ್ತಿರುವ ರವೀಂದ್ರನ್ ಅವರಿಗೆ ಈ ತೀರ್ಪು ಮತ್ತೊಂದು ಶಾಕ್ ನೀಡಿದೆ.























