ಪುತ್ತೂರು: ಮಧ್ಯಮ ವರ್ಗದ ಪ್ರತಿರೂಪವಾಗಿ ಮೂಡಿ ಬಂದಿರುವ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಶುಕ್ರವಾರ ಕರಾವಳಿಯಾದ್ಯಂತ ತೆರೆ ಕಂಡಿದ್ದು, ಪುತ್ತೂರಿನ ಜಿಎಲ್ ವನ್ ಮಾಲ್’ನಲ್ಲಿರುವ ಭಾರತ್ ಸಿನಿಮಾಸ್’ನಲ್ಲಿ ಉದ್ಘಾಟನೆಗೊಂಡಿತು.
ದೀಪ ಬೆಳಗಿಸಿ ಸಿನಿಮಾ ಉದ್ಘಾಟಿಸಿದ ಬ್ರಹ್ಮವಾಹಕ
ರಾಧಾಕೃಷ್ಣ ಪುತ್ತೂರಾಯ ಮಾತನಾಡಿ, ಸಿನಿಮಾ ಶತದಿನ ಪೂರೈಸಿ ಮನೆಮನೆಗೆ ತಲುಪುವಂತಾಗಲಿ ಎಂದು ಶುಭಹಾರೈಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ತುಳು ಸಿನಿಮಾ ಇಂದು ಉತ್ತಮ ಹೆಸರು ಮಾಡುತ್ತಿದೆ. ವಿದೇಶದಲ್ಲೂ ತುಳು ಸಿನಿಮಾ ಓಡುತ್ತಿದೆ. ಎಲ್ಲಾ ಆಯಾಮಗಳಲ್ಲೂ ತುಳು ಸಿನಿಮಾ ಗೆಲ್ಲಬೇಕು ಎಂದು ಹಾರೈಸಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ತುಳುವಿಗೆ ಸ್ಥಾನಮಾನ ಸಿಗಬೇಕು ಎಂದು ಹೋರಾಡುತ್ತಿರುವ ಹೊತ್ತಿನಲ್ಲಿ ತುಳು ಸಿನಿಮಾಗಳು ಬರುತ್ತಿವೆ. ಬ್ರಹ್ಮವಾಹಕರಾಗಿ್ ಪರಿಚಯವಾಗಿರುವ ರಾಧಾಕೃಷ್ಣ ಪುತ್ತೂರಾಯ ಅವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಯಶಸ್ಸಾಗಲಿ ಎಂದು ಹಾರೈಸಿದರು.
ರಂಗನಟ ಸುಂದರ್ ರೈ ಮಂದಾರ ಮಾತನಾಡಿ, ಮಿಡ್ಲ್ ಕ್ಲಾಸ್ ಸಿನಿಮಾ ಹೇಗೆಂದರೆ ನಾಲ್ಕು ಫೀಟಿನ ಹೊದಿಕೆಯ ಹಾಗೆ. ತಲೆಗೆ ಎಳೆದರೆ ಕಾಲಿಗೆ ಇಲ್ಲ ಎಂಬ ಸ್ಥಿತಿ. ಇದನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಯಶಸ್ಸಾಗಲಿ ಎಂದು ಹಾರೈಸಿದರು.
ಆರ್.ಸಿ. ನಾರಾಯಣ್, ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಗೀತಾ ರಾಧಾಕೃಷ್ಣ ಪುತ್ತೂರಾಯ, ಭಾರತ್ ಸಿನಿಮಾಸ್’ನ ಜಯರಾಮ್ ರೈ ಉಪಸ್ಥಿತರಿದ್ದರು.
ಪದ್ಮರಾಜ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.