ದೇವ ದಾಸ್’ನ ಲೀಲಾ ತುಳು ಸಿನಿಮಾ ಕರಾವಳಿಯಾದ್ಯಂತ ಏ. 24ರಂದು ಬಿಡುಗಡೆಗೊಂಡಿದ್ದು, ಶನಿವಾರ ಪುತ್ತೂರಿನ ಜಿಎಲ್ ವನ್ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ ಸಿನಿಮಾದ ನಾಯಕ, ನಾಯಕಿ ಹಾಗೂ ಅರವಿಂದ್ ಬೋಳಾರ್ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿತು.
ಸಿನಿಮಾ ಉದ್ಘಾಟಿಸಿ ಮಾತನಾಡಿದ ತಂತ್ರಿ ಪ್ರೀತಂ ಪುತ್ತೂರಾಯ ಕುಕ್ಕಾಡಿ, ತುಳುನಾಡಿನಲ್ಲಿ ಕಲಾವಿದರನ್ನು ಬೆಳೆಸುವ ವಾತಾವರಣ ಇದೆ. ಇಲ್ಲಿನ ಕಲಾವಿದರಿಗೆ ತಾಯಿ ಬೇರು ದೇವದಾಸ್ ಕಾಪಿಕಾಡ್. ಇದರಲ್ಲಿ ಹುಟ್ಟಿದ ಕಲಾರತ್ನಗಳು ಅರವಿಂದ್ ಬೋಳಾರ್, ನವೀನ್ ಡಿ. ಪಡೀಲ್ ಮೊದಲಾದವರು. ಇವರೆಲ್ಲಾ ನಮ್ಮ ನಾಡಿನ ಕಲಾರತ್ನಗಳಾಗಿದ್ದಾರೆ ಎನ್ನುವುದೇ ಹೆಮ್ಮ ಎಂದರು.
ದೇವದಾಸ್ ನ ಲೀಲಾ ಬಿಡುಗಡೆ ಆಗಿದೆ. ಉತ್ತಮ ಕಲಾವಿದರು, ಉತ್ತಮ ಸಿನಿಮಾ ಇದಾಗಿದ್ದು, ತುಳುವರ ಮನ ಗೆಲ್ಲಲಿ. ಶ್ರಮಕ್ಕೆ ಸರಿಯಾಗಿ ಆರ್ಥಿಕವಾಗಿ ಲಾಭವಾಗಲಿ ಎಂದು ಹಾರೈಸಿದರು.
ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಮಾತನಾಡಿ, ಭಯ ಇದ್ದಲ್ಲಿ ಜಯ. ಹಾಗಾಗಿ ದೇವರಿಗೆ ನಮಸ್ಕರಿಸಿಯೇ ಇಲ್ಲಿಗೆ ಆಗಮಿಸಿದೆ. ಜನರು ಈ ಸಿನಿಮಾವನ್ನು ಸ್ವೀಕರಿಸಿದರೆ ದೇವ ದಾಸ್ ನ ಲೀಲಾ ಸಿನಿಮಾ ಯಶಸ್ಸಾದಂತೆ ಎಂದ ಅವರು, ತೇಜಸ್ ಪೂಜಾರಿ ನಿರ್ದೇಶನದಲ್ಲಿ ಉತ್ತಮ ಕಥೆಯನ್ನು ಹೆಣೆದು ಅತ್ಯುತ್ತಮ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಒಳ್ಳೆಯ ಕಲಾವಿದರಿದ್ದಾರೆ ಎಂದರು.
ದೇವ ದಾಸ್ ನ ಲೀಲಾ – ಸಿನಿಮಾಕ್ಕೆ ಒಂದು ಹಿನ್ನೆಲೆ ಇದೆ. ಅದನ್ನು ತಿಳಿದುಕೊಳ್ಳಬೇಕಾದರೆ ಸಿನಿಮಾ ನೋಡಿ. ತುಳುವಿನ ಎಲ್ಲಾ ಸಿನಿಮಾವನ್ನು ಜನರು ಗೆಲ್ಲಿಸಿಕೊಟ್ಟಿದ್ದಾರೆ. ಅದೇ ರೀತಿ ಈ ಸಿನಿಮಾವನ್ನು ಗೆಲ್ಲಿಸಿಕೊಡುವ ವಿಶ್ವಾಸ ಇದೆ ಎಂದ ಅವರು, ಪುತ್ತೂರಿನ ಜನರೆಂದರೆ ನನಗೆ ಜೀವ. ರಂಗಭೂಮಿಯಲ್ಲಿದ್ದಾಗಲೇ ಇಲ್ಲಿನ ಜನರು ನನಗೆ ಬೆಂಬಲ ನೀಡಿದ್ದಾರೆ ಎಂದು ನೆನಪಿಸಿಕೊಂಡರು.
ಮೌತ್ ಪಬ್ಲಿಸಿಟಿ ಇಂದು ತುಂಬಾ ಮುಖ್ಯ. ಇದು ಇಂದಿನ ಟ್ರೆಂಡ್ ಕೂಡ. ಹಾಗಾಗಿ ಸಿನಿಮಾ ನೋಡಿದವರು ಸಿನಿಮಾದ ಬಗ್ಗೆ ನಿಮ್ಮ ಪರಿಚಯಸ್ಥರ ಬಳಿ ಉತ್ತಮ ಮಾತುಗಳನ್ನು ಮಾತನಾಡುವಂತೆ ವಿನಂತಿ ಮಾಡಿಕೊಂಡರು.
ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲ್, ದಕ್ಷ ಕನ್’ಸ್ಟ್ರಕ್ಷನಿನ ರವೀಂದ್ರ, ನಿರ್ದೇಶಕ ತೇಜಸ್ ಪೂಜಾರಿ, ನಾಯಕ ನಟ ಎಲ್ಟನ್ ಜೆಫ್, ನಾಯಕಿ ನಟಿ ಅದ್ವಿತಿ ಶೆಟ್ಟಿ, ನಟಿ ದೀಕ್ಷಾ ರೈ, ಭಾರತ್ ಸಿನಿಮಾಸ್ ಮ್ಯಾನೇಜರ್ ಜಯರಾಂ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.
ಪದ್ಮರಾಜ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಸಿನಿಮಾ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ವಂದಿಸಿದರು.























