ಬ್ಯಾಂಕ್ ಎನ್ನುವುದು ನಮ್ಮ ನಗ (ಚಿನ್ನಾಭರಣ) – ನಗದು ತೆಗೆದಿಡಲು ಸೇಫ್ ಜಾಗ ಎಂದೇ ನಾವು ಭಾವಿಸಿರುತ್ತೇವೆ. ಇದು ಹೌದು ಕೂಡ. ಆದರೆ ರಾಜ್ಯದ ಗಡಿ ಅಡ್ಯನಡ್ಕದಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣ ಹಲವು ಸಂದೇಹಗಳಿಗೆ ಎಡೆ ನೀಡಿದೆ.
ಅಡ್ಯನಡ್ಕದ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣಗಳಂತಹ ಅನೇಕ ಘಟನೆಗಳನ್ನು ಕೇಳಿರುತ್ತೇವೆ. ಇಂತಹ ಘಟನೆಗಳ ಬಗ್ಗೆ ವೀಡಿಯೋ, ಸಿನಿಮಾಗಳನ್ನು ಕಂಡಿರುತ್ತೇವೆ. ಆದರೆ ಇದೇ ವಿಚಾರ ನಿಜ ಜೀವನದಲ್ಲಿ ಘಟಿಸಿದಾಗ, ನಾವು ಬೆವರಿಳಿಸಿ ದುಡಿದ ಹಣದ ಕಥೆಯೇನು? ಜೀವನದ ಭದ್ರತೆಗೆಂದೋ, ಅನಿವಾರ್ಯ ಸಮಾರಂಭಗಳಿಗೆಂದೋ ತೆಗೆದಿಟ್ಟ ಹಣ ಪರರ ಪಾಲಾದರೆ ನಮ್ಮ ಪಾಡೇನು?
ಇಂತಹ ಅನೇಕ ದುಮ್ಮಾನಗಳು ನಮ್ಮ ಮನಸ್ಸನ್ನು ಆವರಿಸಿಕೊಳ್ಳುವುದು ಸಹಜ. ಆದರೆ ನಾವು ಅಷ್ಟು ಭಯ ಪಡುವ ಅಗತ್ಯ ಇಲ್ಲ ಎನ್ನುತ್ತವೆ ಆರ್. ಬಿ. ಐ. ನಿಯಮಗಳು. ಇತ್ತೀಚಿನ ಕೆಲ ಘಟನೆಗಳ ಬಳಿಕ ತನ್ನ ನಿಯಮವನ್ನು ಇನ್ನಷ್ಟು ಬಿಗಿ ಮಾಡಿದ್ದು ಇದೆ. ಹಾಗೆಂದು, ಗ್ರಾಹಕರಾದ ನಾವು ಕಣ್ಮುಚ್ಚಿ ಕುಳಿತುಕೊಳ್ಳುವಂತಿಲ್ಲ ಎನ್ನುವುದನ್ನು ಮರೆಯುವಂತಿಲ್ಲ. ಹಾಗಾದರೆ ಗ್ರಾಹಕರಾಗಿ ನಾವೇನು ಮಾಡಬೇಕು? ನಮ್ಮ ಜವಾಬ್ದಾರಿಗಳೇನು? ಈ ಎಲ್ಲಾ ಮಾಹಿತಿ ಈ ಲೇಖನದಲ್ಲಿದೆ.
ಆರ್ ಬಿ ಐ ನಿಯಮಗಳಲ್ಲಿ ಭಾರೀ ಬದಲಾವಣೆ:
ಬ್ಯಾಂಕ್ ಗೆ ಸಂಬಂಧಪಟ್ಟಂತೆ ಸಾಕಷ್ಟು ನಿಯಮಗಳು ಪ್ರಚಲಿತದಲ್ಲಿವೆ. ಇದರಲ್ಲಿನ ಹಲವು ಪ್ರಮುಖ ನಿಯಮಗಳಲ್ಲಿ ಆರ್ ಬಿ ಐ ಬದಲಾವಣೆ ಮಾಡಿದೆ. ಅದರಲ್ಲೂ ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.
ಆರ್ ಬಿ ಐ ಬದಲಾವಣೆಗೆ ಒಳಪಡಿಸಿರುವ ನಿಯಮಗಳು ಗ್ರಾಹಕರಾದ ನಿಮ್ಮ ಮೇಲೆ ನೇರ ಪ್ರಭಾವ ಬೀರುತ್ತವೆ. ಜನ ತಮ್ಮ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ನಲ್ಲಿ ಇಡುತ್ತಾರೆ. ಇದರಿಂದ ಈ ದುಬಾರಿ ವಸ್ತುಗಳು ಸುರಕ್ಷಿತವಾಗಿವೆ. ವಾಸ್ತವವಾಗಿ, ಕಳ್ಳತನ ಅಥವಾ ನಷ್ಟದ ಸಾಧ್ಯತೆಗಳು ಬ್ಯಾಂಕುಗಳಿಗಿಂತ ನಮ್ಮ ಮನೆಗಳಲ್ಲಿ ಹೆಚ್ಚು. ಆದರೆ ಈಗ ನಿಮ್ಮ ಈ ವಿಶೇಷ ಸೌಲಭ್ಯಕ್ಕೆ ಗ್ರಹಣ ಹಿಡಿಯಬಹುದು. ಆರ್ಬಿಐ ನಿಯಮಗಳ ಪ್ರಕಾರ, ನೀವು ದೀರ್ಘಾವಧಿಯವರೆಗೆ ಲಾಕರ್ ಅನ್ನು ತೆರೆಯದಿದ್ದರೆ, ಬ್ಯಾಂಕ್ ನಿಮ್ಮ ಲಾಕರ್ ಅನ್ನು ತೆರೆಯಯಲು ಅವಕಾಶ ನೀಡಿದೆ.
ನಿಯಮಗಳ ಪ್ರಕಾರ, ಲಾಕರ್ಗೆ ಬೆಂಕಿ, ಕಳ್ಳತನ, ದರೋಡೆ ಅಥವಾ ಕಳ್ಳತನ ಸಂಭವಿಸಿದಲ್ಲಿ, ಬ್ಯಾಂಕ್ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ ಮತ್ತು ಈ ಸಂದರ್ಭಗಳಲ್ಲಿ ಬ್ಯಾಂಕ್ ಗ್ರಾಹಕರಿಗೆ ಲಾಕರ್ ನ ವಾರ್ಷಿಕ ಬಾಡಿಗೆಯ 100 ಪಟ್ಟು ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ, ಭೂಕಂಪ, ಪ್ರವಾಹದಂತಹ ನೈಸರ್ಗಿಕ ವಿಕೋಪಗಳಿಂದ ಲಾಕರ್ ಹಾನಿಗೊಳಗಾದರೆ, ಅಂತಹ ನಷ್ಟಕ್ಕೆ ಬ್ಯಾಂಕ್ ಹೊಣೆ ಆಗುವುದಿಲ್ಲ.
ತಿದ್ದುಪಡಿ ಮಾಡಿದ ಆರ್. ಬಿ. ಐ.
ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ವಿವಿಧ ಬೆಳವಣಿಗೆಗಳು, ಗ್ರಾಹಕರ ದೂರುಗಳ ಸ್ವರೂಪ ಮತ್ತು ಬ್ಯಾಂಕ್ ಗಳು ಮತ್ತು ಭಾರತೀಯ ಬ್ಯಾಂಕ್ ಗಳ ಸಂಘದಿಂದ ಪಡೆದ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು, ಆರ್ ಬಿ ಐ ಇತ್ತೀಚೆಗೆ ಸುರಕ್ಷಿತ ಠೇವಣಿ ಲಾಕರ್ಗಳ ಕುರಿತು ತನ್ನ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.
ಲಾಕರ್ ತೆರೆಯಲು ಬ್ಯಾಂಕಿಗೆ ಅನುಮತಿ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಸುರಕ್ಷಿತ ಠೇವಣಿ ಲಾಕರ್ಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾರ್ಗಸೂಚಿಯಲ್ಲಿ, ಲಾಕರ್ ಅನ್ನು ದೀರ್ಘಕಾಲದವರೆಗೆ ನೀವು ತೆರೆಯದಿದೇ ಇದ್ದಾಗ, ಆ ಲಾಕರ್ ಅನ್ನು ತೆರೆಯಲು ಬ್ಯಾಂಕುಗಳಿಗೆ ಅವಕಾಶ ನೀಡಲಾಗಿದೆ. ನೀವು ನಿಯಮಿತವಾಗಿ ಬಾಡಿಗೆಯನ್ನು ಪಾವತಿಸುತ್ತಿದ್ದರೂ ಸಹ.
ಬ್ಯಾಂಕ್ ಲಾಕರ್ ಮುರಿಯುವ ನಿಯಮ:
ಪರಿಷ್ಕೃತ ಆರ್ಬಿಐ ಮಾರ್ಗಸೂಚಿಗಳು ಲಾಕರ್ ಅನ್ನು ಕೆಡವಲು ಮತ್ತು ಲಾಕರ್ನಲ್ಲಿರುವ ವಿಷಯಗಳನ್ನು ಅದರ ನಾಮಿನಿ / ಕಾನೂನು ಉತ್ತರಾಧಿಕಾರಿಗೆ ವರ್ಗಾಯಿಸಲು ಅಥವಾ ವಿಷಯಗಳನ್ನು ಪಾರದರ್ಶಕ ರೀತಿಯಲ್ಲಿ ವಿಲೇವಾರಿ ಮಾಡಲು ಬ್ಯಾಂಕ್ ಸ್ವತಂತ್ರವಾಗಿರುತ್ತದೆ ಎಂದು ಹೇಳುತ್ತದೆ. ಲಾಕರ್ – ಬಾಡಿಗೆದಾರನು 7 ವರ್ಷಗಳ ಅವಧಿಗೆ ನಿಷ್ಕ್ರಿಯವಾಗಿದ್ದರೆ ಮತ್ತು ನಿಯಮಿತ ಬಾಡಿಗೆಯನ್ನು ಪಾವತಿಸಿದರೆ ಅದನ್ನು ಪತ್ತೆ ಹಚ್ಚಲಾಗುವುದಿಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿಗಳನ್ನು ರಕ್ಷಿಸುವ ಕೇಂದ್ರ ಬ್ಯಾಂಕ್ ಯಾವುದೇ ಲಾಕರ್ ಅನ್ನು ಮುರಿಯುವ ಮೊದಲು ಅನುಸರಿಸಬೇಕಾದ ವಿವರವಾದ ಸೂಚನೆಗಳನ್ನು ಸಹ ನೀಡಿದೆ.
ಬ್ಯಾಂಕ್ ಲಾಕರ್ ತೆಗೆದುಕೊಳ್ಳುವವರಿಗೆ ಎಚ್ಚರಿಕೆ
ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್ ಲಾಕರ್ – ಹಿರಿಯರಿಗೆ ಪತ್ರದ ಮೂಲಕ ನೋಟಿಸ್ ನೀಡುತ್ತದೆ ಮತ್ತು ನೋಂದಾಯಿತ ಇಮೇಲ್ ಐಡಿ ಮತ್ತು ಮೊಬೈಲ್ ಫೋನ್ ಸಂಖ್ಯೆಗೆ ಇಮೇಲ್ ಮತ್ತು ಎಸ್ ಎಂ ಎಸ್ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಪತ್ರವನ್ನು ತಲುಪಿಸದೆ ಹಿಂತಿರುಗಿಸಿದರೆ ಅಥವಾ ತೆಗೆದುಕೊಳ್ಳುವವರು ಲಾಕರ್ ಬಾಡಿಗೆದಾರರನ್ನು ಪತ್ತೆ ಹಚ್ಚದಿದ್ದರೆ, ಬ್ಯಾಂಕ್ ಲಾಕರ್ ಬಾಡಿಗೆದಾರರಿಗೆ ಅಥವಾ ಲಾಕರ್ನ ವಿಷಯಗಳಲ್ಲಿ ಆಸಕ್ತಿಯುಳ್ಳ ಯಾವುದೇ ವ್ಯಕ್ತಿಗೆ ಪ್ರತಿಕ್ರಿಯಿಸಲು ಸಮಂಜಸವಾದ ಸಮಯವನ್ನು ನೀಡುವ ಎರಡು ಸೂಚನೆಗಳನ್ನು ಪೇಪರ್ಗಳಲ್ಲಿ ಸಾರ್ವಜನಿಕ ಸೂಚನೆಗಳನ್ನು ನೀಡುತ್ತದೆ (ಒಂದು ಇಂಗ್ಲಿಷ್ನಲ್ಲಿ ಮತ್ತು ಇನ್ನೊಂದು ಸ್ಥಳೀಯ ಭಾಷೆಯಲ್ಲಿ).
ಲಾಕರ್ ತೆರೆಯುವ ಮಾರ್ಗಸೂಚಿಗಳು
ಬ್ಯಾಂಕ್ನ ಅಧಿಕಾರಿಯ ಸಮ್ಮುಖದಲ್ಲಿ ಲಾಕರ್ ತೆರೆಯಬೇಕು ಮತ್ತು ಇಬ್ಬರು ಸ್ವತಂತ್ರ ಸಾಕ್ಷಿಗಳು ಮತ್ತು ಸಂಪೂರ್ಣ ಪ್ರಕ್ರಿಯೆಯ ವೀಡಿಯೊ ರೆಕಾರ್ಡಿಂಗ್ ಮಾಡಬೇಕು ಎಂದು ಕೇಂದ್ರ ಬ್ಯಾಂಕ್ನ ಮಾರ್ಗಸೂಚಿಗಳು ಹೇಳುತ್ತವೆ. ಲಾಕರ್ ತೆರೆದ ನಂತರ, ಗ್ರಾಹಕರು ಕ್ಲೈಮ್ ಮಾಡುವವರೆಗೆ ಟ್ಯಾಂಪರ್ ಪ್ರೂಫ್ ರೀತಿಯಲ್ಲಿ ಫೈರ್ ಪ್ರೂಫ್ ವಾಲ್ಟ್ನೊಳಗೆ ವಿವರವಾದ ದಾಸ್ತಾನುಗಳೊಂದಿಗೆ ವಿಷಯಗಳನ್ನು ಮುಚ್ಚಿದ ಕವರ್ನಲ್ಲಿ ಇರಿಸಲಾಗುತ್ತದೆ ಎಂದು ಆರ್ ಬಿ ಐ ತಿಳಿಸಿದೆ.
ನಿಮ್ಮ ಲಾಕರ್ ಕಳೆದರೆ ಪರಿಹಾರ
ಲಾಕರ್ನಲ್ಲಿರುವ ವಸ್ತುಗಳ ಕಳ್ಳತನ, ದರೋಡೆ ಮತ್ತಿತರ ಕಾರಣಗಳಿಂದ ಕಳೆದು ಹೋದರೆ ಆಯಾ ಬ್ಯಾಂಕ್ ಗಳೇ ಅದಕ್ಕೆ ಹೊಣೆ ಹೊರಬೇಕಾಗುತ್ತದೆ. ಬ್ಯಾಂಕಿನ ಲಾಕರ್ ನಿಯಮದ ಪ್ರಕಾರ ಕ್ರಮ ಕೈಗೊಳ್ಳಬೇಕು. ಸೇಫ್ ಡಿಪಾಸಿಟ್ ಬಾಕ್ಸ್ನ ಬಾಡಿಗೆಯ 100 ಪಟ್ಟು ಹಣವನ್ನು ಪರಿಹಾರವಾಗಿ ಬ್ಯಾಂಕ್ ಪಾವತಿಸಬೇಕಾಗುತ್ತದೆ. ಒಂದು ವೇಳೆ ಬೆಂಕಿ ಅನಾಹುತ ಅಥವಾ ಕಟ್ಟಡ ಕುಸಿತ ಉಂಟಾದರೆ ಪರಿಹಾರಕ್ಕೆ ಗ್ರಾಹಕರಿಗೆ ಹಕ್ಕು ನೀಡಲಾಗಿದೆ.
ಬ್ಯಾಂಕ್ಗೆ ಭದ್ರತೆ ಹೊಣೆಗಾರಿಕೆ
ಬ್ಯಾಂಕಿನ ಲಾಕರ್ ಕೊಠಡಿಯು ಎಕ್ಸಿಟ್ ಮತ್ತು ಎಂಟ್ರೆನ್ಸ್ ಕಡ್ಡಾಯವಾಗಿ ಒಂದೇ ಆಗಿರತಕ್ಕದ್ದು. ಬ್ಯಾಂಕ್ನ ಅಧಿಕಾರಿ ಅಥವಾ ಸಿಬ್ಬಂದಿಗಳು ಬ್ಯಾಂಕ್ನ ಲಾಕರ್ ಕೊಠಡಿಗೆ ಸ್ಪಷ್ಟವಾಗಿ ಪ್ರವೇಶ ಮತ್ತು ನಿರ್ಗಮನ ಎಂದು ನಮೂದಿಸಿ, ಒಂದೇ ಎಂಬುದನ್ನು ಮನದಟ್ಟು ಮಾಡಿಕೊಡುವಂತೆ ನಿರ್ಮಿಸಬೇಕು. ಲಾಕರ್ನ ಕೊಠಡಿಯು ಮಳೆ ನೀರು, ಬೆಂಕಿ ಮತ್ತಿತರ ಕಾರಣಗಳಿಂದ ಹಾಳಾಗದೆ ಇರುವುದನ್ನು ಬ್ಯಾಂಕ್ ಖಚಿತ ಪಡಿಸಬೇಕು. ಹಾಗೂ 180 ದಿನಗಳ ಸಿಸಿಟಿವಿ ರೆಕಾರ್ಡಿಂಗ್ ಕಡ್ಡಾಯವಾಗಿ ಕಾಯ್ದಿರಿಸಬೇಕು. ಒಂದು ವೇಳೆ ಸೇಫ್ ಲಾಕರ್ ಹೊಂದಿರುವ ಗ್ರಾಹಕರು ದೂರು ದಾಖಲಿಸಿದ ಘಟನೆ ನಡೆದರೆ, ಆಗ ಸಿಸಿಟಿವಿ ಫೂಟೇಜ್ಗಳನ್ನು ಪೊಲೀಸ್ ತನಿಖೆಗೆ ಒದಗಿಸುವುದು ಕಡ್ಡಾಯ.
ಲಾಕರ್ ಗುಣಮಟ್ಟ
ಆರ್ ಬಿ ಐ ನಿಯಮಾವಳಿ ಅನ್ವಯ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಐಬಿಎಸ್) ಶಿಫಾರಸುಗೊಳಿಸಿದ ಹೊಸ ಮೆಕ್ಯಾನಿಕಲ್ ಲಾಕರ್ ಗಳನ್ನು ಬಳಸಬೇಕು. ಆರ್ ಬಿ ಐ ನಿಗದಿ ಪಡಿಸಿದ ಸೈಬರ್ ಸೆಕ್ಯೂರಿಟಿ ಫ್ರೇಮ್ ವರ್ಕನಂತೆ ಎಲೆಕ್ಟ್ರಾನಿಕ್ ಲಾಕರ್ ಸಿಸ್ಟಮ್ ಹೊಂದಿರತಕ್ಕದ್ದು. ಬ್ಯಾಂಕ್ ಲಾಕರ್ ಗಳ ಕೀಲಿ ಕೈಗಳ ಮೇಲೆ ಆಯಾ ಬ್ಯಾಂಕ್ ಮತ್ತು ಶಾಖೆಯ ಕೋಡ್ ಗಳನ್ನು ನಮೂದಿಸಿರಬೇಕು. ಬ್ಯಾಂಕ್ ಬಯಸಿದರೆ ಗ್ರಾಹಕರೂ ಹೆಚ್ಚುವರಿ ಪ್ಯಾಡ್ಲಾಕ್ ಹೊಂದಬಹುದು.
ಲಾಕರ್ ಬಾಡಿಗೆ
ಒಂದು ವೇಳೆ ಗ್ರಾಹಕರು ಲಾಕರ್ ಬಾಡಿಗೆ ಶುಲ್ಕ ಪಾವತಿಸದೇ ಇದ್ದಲ್ಲಿ ಗ್ರಾಹಕರ ಅವಧಿ ಠೇವಣಿಯ ಹಣವನ್ನು ಬ್ಯಾಂಕ್ಗಳು ಬಳಸಿ ಕೊಳ್ಳಬಹುದಾಗಿದೆ. ಬಾಡಿಗೆ ಹಣ ನೀಡದೇ ಇದ್ದಲ್ಲಿ ಬ್ಯಾಂಕ್ ಅಧಿಕಾರಿಗಳೇ ಗ್ರಾಹಕರ ಲಾಕರ್ ತೆಗೆದು ಬಾಡಿಗೆ ಶುಲ್ಕ ತೆಗೆದುಕೊಳ್ಳಬಹುದು.
ನಾಮನಿರ್ದೇಶನ
ಬ್ಯಾಂಕ್ ಗಳು ಲಾಕರ್ ನಲ್ಲಿ ಸಂಪತ್ತು ಇರಿಸುವ ಗ್ರಾಹಕರಿಗೆ ನಾಮನಿರ್ದೇಶನ ಸೌಲಭ್ಯ ಒದಗಿಸಬೇಕು. ಗ್ರಾಹಕರು ಲಾಕರ್ನಲ್ಲಿ ಇರಿಸಿದ ವಸ್ತುಗಳ ವಿವರಗಳನ್ನು ಖಾತ್ರಿ ಪಡಿಸಲು ಗ್ರಾಹಕರೇ ಒಂದು ಪಟ್ಟಿ ತಯಾರಿಸಿ ಅದನ್ನು ಒಪ್ಪಂದದ ಮಾದರಿಯಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬಹುದು.
ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳವು ಪ್ರಕರಣ:
ಬ್ಯಾಂಕಿನಲ್ಲಿರಿಸಿದ ನಮ್ಮ ಸ್ವತ್ತುಗಳು ಎಷ್ಟು ಸುರಕ್ಷಿತ ಎನ್ನುವ ದೃಷ್ಟಿಯಿಂದ ನೋಡುವಾಗ ಅಡ್ಯನಡ್ಕ ಬ್ಯಾಂಕ್ ದರೋಡೆ ಪ್ರಕರಣ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಬ್ಯಾಂಕಿನ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವುಗೈದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕಿನಲ್ಲಿ ನಡೆದಿದ್ದು, ಫೆ.8ರಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿತ್ತು.
ಬ್ಯಾಂಕ್ನ ಹಿಂಭಾಗ ಪೊದರುಗಳಿಂದ ಆವೃತ್ತವಾಗಿತ್ತು. ಈ ದಾರಿಯಾಗಿ ಬಂದ ಕಳ್ಳರು ಕಿಟಕಿಯ 8 ಸರಳುಗಳನ್ನು ಕಬ್ಬಿಣ ತುಂಡರಿಸುವ ಗರಗಸ ಬಳಸಿ ತುಂಡರಿಸಿ ಬಳಿಕ ಒಳಗೆ ನುಸುಳಿರುವ ಬಗ್ಗೆ ಸುಳಿವು ಪತ್ತೆಯಾಗಿತ್ತು. ಬಳಿಕ ಕಪಾಟಿನಲ್ಲಿರಿಸಲಾಗಿದ್ದ ನಗದನ್ನು ದೋಚಿದ್ದರು. ಗ್ರಾಹಕರ ವೈಯಕ್ತಿಕ ಲಾಕರ್ಗಳ ಪೈಕಿ ಕೆಲವನ್ನು ತೆರೆಯುವಲ್ಲಿ ತಂಡ ಯಶಸ್ವಿಯಾಗಿತ್ತು ಕೂಡ. ಉಳಿದಂತೆ ಅಡವಿರಿಸಿದ್ದ ಚಿನ್ನಾಭರಣವಿದ್ದ ಸೇಫ್ ಲಾಕರ್ನ ಬಾಗಿಲನ್ನು ಗ್ಯಾಸ್ ಕಟ್ಟರ್ ಬಳಸಿ ತುಂಡರಿಸುವ ಪ್ರಯತ್ನ ನಡೆದಿದೆಯಾದರೂ ಅದು ವಿಫಲವಾಗಿರುವುದರಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸುರಕ್ಷಿತವಾಗಿ ಉಳಿದಿತ್ತು.
ಅಡ್ಯನಡ್ಕ ಪೇಟೆಯಲ್ಲಿ ರಾತ್ರಿ ಸುಮಾರು 11 ಗಂಟೆಯವರೆಗೂ ಜನ ಸಂಚಾರ ಇದ್ದು, ಆ ಸಮಯದ ಬಳಿಕ ಕಳ್ಳರ ತಂಡ ಆಗಮಿಸಿರಬಹುದು ಎಂದು ಅಂದಾಜಿಸಲಾಗಿತ್ತು. ಫೆ. 8ರಂದು ಬೆಳಿಗ್ಗೆ 9.30ರ ಸುಮಾರಿಗೆ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ಗೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ಅವರು ಕೂಡಲೇ ವಿಟ್ಲ ಠಾಣಾ ಪೊಲೀಸರಿಗೆ ಹಾಗೂ ಬ್ಯಾಂಕ್ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ಬ್ಯಾಂಕ್ ಆವರಣವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು.
ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ಹೊರತು ಪಡಿಸಿ ಉಳಿದವರನ್ನು ಹೊರಗಡೆ ನಿಲ್ಲಿಸಿ ಅಗತ್ಯ ವಿಚಾರಣೆ ನಡೆಸಿದ್ದರು. ಅಂದಾಜು ಪ್ರಕಾರ ಲಾಕರ್ ಒಳಗಿದ್ದ 17 ಲಕ್ಷ ರೂಪಾಯಿ ನಗದು ಹಾಗೂ ನಾಲ್ಕು ವೈಯಕ್ತಿಕ ಲಾಕರ್ಗಳನ್ನು ಕಳ್ಳರು ತೆರೆದು ಅದರಲ್ಲಿದ್ದ ಚಿನ್ನಾಭರಣವನ್ನು ದೋಚುವಲ್ಲಿ ಯಶಸ್ವಿಯಾಗಿದ್ದರು. ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿತ್ತು. ಚಿನ್ನಾಭರಣ ಅಡವು ಸಾಲ ನೀಡಿದ ಚಿನ್ನ ಭದ್ರವಾಗಿದೆ ಎಂದು ಬ್ಯಾಂಕ್ ನ ಸಿಬ್ಬಂದಿಗಳು ತಿಳಿಸಿದ್ದರು.
ಹಳೆಯ ಕಟ್ಟಡದಲ್ಲಿ ಈ ಬ್ಯಾಂಕ್ ಇದ್ದು, ಬ್ಯಾಂಕಿನ ಸುತ್ತಮುತ್ತಲೂ ಕಾಡು – ಪೊದೆಗಂಟಿಗಳು ಬೆಳೆದು ಕಾಡಿನಂತಾಗಿತ್ತು. ಈ ಜಾಗದ ಮೂಲಕ ಕಳ್ಳರು ಕನ್ನ ಹಾಕಿದ್ದರು. ಯಾವುದೇ ಮುಂಜಾಗ್ರತೆ ಇಲ್ಲದ ಕಟ್ಟಡದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಅಜಾಗರೂಕತೆಯೇ ಕಳ್ಳತನಕ್ಕೆ ಕಾರಣವಾಗಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಶ್ವಾನದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಜಾಗೂ ಎ. ಎಸ್. ಎಲ್. ಅಧಿಕಾರಿಗಳ ತಂಡವನ್ನು ಕರೆಸಿ ಪರಿಶೀಲನೆ ನಡೆಸಲಾಗಿತ್ತು. ಶ್ವಾನವು ಬ್ಯಾಂಕ್ ನ ಹಿಂಬದಿಯಲ್ಲಿರುವ ರೈಸ್ ಮಿಲ್ ವರೆಗೆ ತೆರಳಿ ಆ ಬಳಿಕ ಮುಖ್ಯ ರಸ್ತೆ ಕಡೆ ತೆರಳಿತ್ತು. ಉಳಿದಂತೆ ಬೆರಳಚ್ಚು ಸಹಿತ ಕೆಲವೊಂದು ಮಾಹಿತಿಗಳನ್ನು ತನಿಖಾ ತಂಡ ಕಲೆ ಹಾಕಿತ್ತು.
ನಾಲ್ಕು ವೈಯ್ಯಕ್ತಿಕ ಲಾಕರ್ ಒಡೆದರು – ಎರಡು ಖಾಲಿಯಾಗಿತ್ತು:
ಬ್ಯಾಂಕ್ ನಲ್ಲಿ ಸುಮಾರು ಇಪ್ಪತ್ತು ವೈಯಕ್ತಿಕ ಲಾಕರ್ ಇದ್ದು, ಅದರಲ್ಲಿ ನಾಲ್ಕನ್ನು ಕಳ್ಳರು ಒಡೆದಿದ್ದರು. ಈ ಪೈಕಿ ಎರಡರಲ್ಲಿ ಚಿನ್ನಭರಣ ಇದ್ದು, ಮತ್ತೆರಡು ಖಾಲಿಯಾಗಿತ್ತು. ಉಳಿದ ಲಾಕರ್ ಗಳನ್ನು ಕಳ್ಳರು ಒಡೆಯದೆ ಹಾಗೇ ಬಿಟ್ಟಿದ್ದರು. ಅಡವಿರಿಸಿದ ಚಿನ್ನಾಭರಣವಿದ್ದ ಲಾಕರ್ ಅನ್ನು ಕಳ್ಳರು ಒಡೆಯುವ ಪ್ರಯತ್ನ ಮಾಡಿದ್ದಾರಾದರೂ ಅದನ್ನು ಒಡೆಯುವಲ್ಲಿ ಕಳ್ಳರ ತಂಡ ವಿಫಲವಾಗಿತ್ತು.
ಮೊಳಗದ ಅಲಾರಾಂ…!
ಕಳ್ಳರು ಬ್ಯಾಂಕಿನ ಹಿಂಬಾಗಿಲಿನ ಕಿಟಕಿ ಮುರಿದು ಒಳನುಗ್ಗಿದ್ದು, ಗ್ಯಾಸ್ ಕಟರ್ ಬಳಸಿ ಸೇಫ್ ಲಾಕರ್ ನ ಬಾಗಿಲು ತುಂಡರಿಸಿ ಕೃತ್ಯ ಎಸಗಿದ್ದರು. ಕೃತ್ಯ ನಡೆಸುವ ವೇಳೆ ಬ್ಯಾಂಕಿನ ಸೆಕ್ಯೂರಿಟಿ ಅಲರಾಂ ಸೈರನ್ ಮಾಡದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಭಾರೀ ಮೌಲ್ಯದ ಚಿನ್ನಾಭರಣಗಳು ವೈಯಕ್ತಿಕ ಲಾಕರ್ ಗಳಲ್ಲಿ ಇತ್ತೆನ್ನಲಾಗಿದ್ದು, ಹಲವು ಮಂದಿ ಗ್ರಾಹಕರು ಬ್ಯಾಂಕ್ ದರೋಡೆ ವಿಚಾರ ಹೊರಬರುತ್ತಿದ್ದಂತೆ ಬ್ಯಾಂಕ್ ಮುಂದೆ ಬರಲಾರಂಭಿಸಿದ್ದರು. ಆದರೆ ಈ ಕುರಿತಾಗಿ ಯಾವುದೇ ಗ್ರಾಹಕರು ವಿಟ್ಲ ಠಾಣೆಗೆ ಅಧಿಕೃತ ದೂರು ನೀಡಿರಲಿಲ್ಲ ಎಂದು ವಿಟ್ಲ ಪೊಲೀಸರು ತಿಳಿಸಿದ್ದರು.
ಹಳೇಯದಾದ ಕಟ್ಟಡ..!:
ಲಾಕರ್ ಇರುವ ಕೊಠಡಿಗಳಲ್ಲಿ ಯಾವುದೇ ರೀತಿಯ ಕಿಟಕಿ ಇರಲಿಲ್ಲ. ಆದರೆ ಈ ಬ್ಯಾಂಕ್ ನಲ್ಲಿ ಲಾಕರ್ ಇರುವ ಕೊಠಡಿಯ ಪಕ್ಕದಲ್ಲಿ ಕಿಟಕಿ ಇದ್ದು, ಈ ಕಟ್ಟಡ ಬ್ಯಾಂಕ್ ಗೆ ಯೋಗ್ಯವಲ್ಲದ ಕಟ್ಟಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆಂತರಿಕ ಭದ್ರತಾ ವೈಫಲ್ಯವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದರು.