ಪುತ್ತೂರು: ಮನೆಗಳನ್ನು ಕಟ್ಟುವುದು ದೊಡ್ಡದಲ್ಲ, ಒಂದು ವ್ಯಕ್ತಿತ್ವ ನಿರ್ಮಾಣ ಮಾಡುವುದು ದೊಡ್ಡ ವಿಷಯ. ದ್ವಾರಕಾ ಪ್ರತಿಷ್ಠಾನದ ಗೋಪಾಲಕೃಷ್ಣರು ಪುರಾಣದ ದ್ವಾರಕೆಗೆ ಹೋಲಿಸಿಕೊಳ್ಳುವಂತೆ ಮುಕ್ರಂಪಾಡಿಯಲ್ಲಿ ಹೊಸ ದ್ವಾರಕಾವನ್ನೇ ನಿರ್ಮಾಣ ಮಾಡಿದ್ದಾರೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಮಹೇಶ್ ಕಜೆ ಪ್ರಶಂಶಿಸಿದರು.
ಪುತ್ತೂರು ದ್ವಾರಕಾ ಪ್ರತಿಷ್ಠಾನದ ವತಿಯಿಂದ ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ಭಾನುವಾರ ಬೆಳಗ್ಗೆ ದ್ವಾರಕೋತ್ಸವ 2026ನ್ನು ಉದ್ಘಾಟಿಸಿ ಮಾತನಾಡಿದರು.
ನೀವು ಕನಸು ಕಾಣಿ, ನಾವು ಅದನ್ನು ಕಟ್ಟಿ ಕೊಡುತ್ತೇವೆ ಎನ್ನುವುದು ಸುಲಭದ ಮಾತಲ್ಲ. ಕನಸುಗಳೇ ಇಲ್ಲದ ಹಾದಿಯಲ್ಲಿ ನಡೆಯುವುದು ಹೇಗೆ ಎನ್ನುವ ಹಿರಿಯರ ಮಾತಿದೆ. ದ್ವಾರಕಾ ಕಾರ್ಪೋರೇಷನ್ ನೀವು ಕಂಡ ಕನಸನ್ನು ನಾವು ನನಸು ಮಾಡುತ್ತೇವೆ ಎಂದು ಹೇಳಿ, ಅದನ್ನು ಸಾಧಿಸಿದರೂ ಕೂಡ. ಅವರಿಗೆ ವಿಶೇಷ ಅಭಿನಂದನೆ ಎಂದರು.
ಶ್ರೀಕೃಷ್ಣನ ದ್ವಾರಕೆ ಬರೀಯ ಒಂದು ಪಟ್ಟಣವಷ್ಟೇ ಆಗಿರಲಿಲ್ಲ. ಮಥುರೆಯಿಂದ ದ್ವಾರಕೆಗೆ ಬಂದ ಕೃಷ್ಣ, ಹೊಸ ನಗರಿಯನ್ನೇ ಸೃಷ್ಟಿಸಿದ. ಭಕ್ತಿ ಭಾವದಿಂದ ಕೂಡಿದ ಆ ಪಟ್ಟಣ ದೈವೀಕ ಸಂಸ್ಕೃತಿಯ ನೆಲೆಯಾಗಿತ್ತು. ಅದೇ ರೀತಿ ಅರ್ತ್ಯಡ್ಕದಿಂದ ಬಂದ ಗೋಪಾಲಕೃಷ್ಣ ಅವರು ಮುಕ್ರಂಪಾಡಿಯಲ್ಲಿ ಏನೇನಿಲ್ಲ ಎಂಬಂತೆ ಎಲ್ಲವನ್ನು ನಿರ್ಮಿಸಿದರು. ಮನೆಯೊಂದನ್ನು ಕಟ್ಟಿ ಕೊಡುವುದಷ್ಟೇ ಅಲ್ಲ, ಹೊಸದೊಂದು ವ್ಯಕ್ತಿತ್ವ ನಿರ್ಮಾಣಕ್ಕೆ ಏನೇನೆಲ್ಲಾ ಬೇಕೋ ಅದನ್ನೆಲ್ಲಾ ಮಾಡಿದರು ಎಂದರು.
ದ್ವಾರಕೆ ಧರ್ಮದ ನೆಲೆ, ಆನಂದದ ಸೆಲೆಯಾಗಿತ್ತು. ಆ ದ್ವಾರಕೆಗೆ ಹೋಲಿಕೆ ಮಾಡಿದರೆ ಈ ದ್ವಾರಕಾದಲ್ಲಿ ಮೌಲ್ಯಧಾರಿತ ಆಯೋಜನೆ, ಸಮುದಾಯದ ಸಹಕಾರ, ಸಂಸ್ಕೃತಿಯ ಆಚರಣೆ, ಸ್ವಯಂ ಸೇವಕರ ಶ್ರಮ ಎಲ್ಲವೂ ಇದೆ. ಆದ್ದರಿಂದ ಇದು ಪುರಾಣದ ದ್ವಾರಕೆಯ ಜೊತೆಗೆ ಹೋಲಿಕೆಯಲ್ಲ, ಪರಂಪರೆಯ ನಿರಂತರತೆ ಎಂದು ವಿಶ್ಲೇಷಿಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಅಂದು ಆ ಗೋಪಾಲಕೃಷ್ಣನಿಂದ ದ್ವಾರಕೆ ಅಭಿವೃದ್ಧಿ ಹೊಂದಿತು, ಇಂದು ಈ ಗೋಪಾಲಕೃಷ್ಣನಿಂದ ಈ ದ್ವಾರಕಾ ಅಭಿವೃದ್ಧಿ ಹೊಂದುತ್ತಿದೆ ಎಂದ ಅವರು, ಗೋಪಾಲಕೃಷ್ಣ ಭಟ್ ಅವರ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು.
ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಮಾತನಾಡಿ, ಶ್ರೀಕೃಷ್ಣನ ದ್ವಾರಕೆಗೆ ಪ್ರವೇಶ ಮಾಡಿದಂತಹ ಅನುಭವ ಇಲ್ಲಿಗೆ ಬಂದ ಹಾಗಾಗಿದೆ. ಶ್ರೀಕೃಷ್ಣನ ಕೆಲಸ ಪಾಲನೆ ಮಾಡುವುದು. ಈ ದ್ವಾರಕೆಯಲ್ಲಿ ಅಸನ, ವಸನ, ವಸತಿ ಮಾಡುವ ಮೂಲಕ ಭಗವಾನ್ ಶ್ರೀಕೃಷ್ಣನಂತೆ, ಹೆಸರಿಗೆ ತಕ್ಕಂತೆ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರಶಂಶಿಸಿದರು.
ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಮಾತನಾಡಿ, ಕೃಷ್ಣ ಇರುವಲ್ಲಿ ಸುಖ, ಸುಖ ಇರುವಲ್ಲಿ ನೆಮ್ಮದಿ, ನೆಮ್ಮದಿ ಇರುವಲ್ಲಿ ಉತ್ತಮ ಜೀವನ ಇರುತ್ತದೆ. ಇದನ್ನೇ ಕುವೆಂಪು ಹೇಳಿದ್ದಾರೆ. ಪ್ರಗತಿಯ ಜೊತೆಗೆ ಜೀವನ ಮೌಲ್ಯವನ್ನು ಬೆಳೆಸಿಕೊಳ್ಳೋಣ ಎಂದರು.
ಸನ್ಮಾನ:
ದ್ವಾರಕಾ ವೇದರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೇದ ವಿದ್ವಾನ್ ಗಣೇಶ ಭಟ್ಟ ಪರಕ್ಕಜೆ ಮಾತನಾಡಿ, ಬ್ರಹ್ಮ ಬರೆದಿದ್ದನ್ನು ಯಾರಿಂದಲೂ ತಿದ್ದಲು ಅಸಾಧ್ಯ. ಆದರೆ ಲಲಿತಾ ತ್ರಿಪುರ ಸುಂದರಿ ತಾಯಿಗೆ ಸಾಧ್ಯ. ಇದಕ್ಕೆ ಸಾಕಷ್ಟು ಪುರಾವೆಗಳು ಇವೆ.
ದ್ವಾರಕಾ ನೃತ್ಯರತ್ನ ಪ್ರಶಸ್ತಿ ಸ್ಬೀಕರಿಸಿ ಮಾತನಾಡಿದ ವಿದ್ವಾನ್ ದೀಪಕ್ ಕುಮಾರ್, ಮೆಕಾಲೆ ಅಳವಡಿಸಿದ ಈ ಶಿಕ್ಷಣ ಪದ್ಧತಿಯಿಂದ ಸ್ವಲ್ಪ ಶಿಕ್ಷಣ ಪಡೆದರೆ ಅದರ ಹತ್ತರಷ್ಟು ಅಹಂಕಾರ ಮನೆ ಮಾಡುತ್ತದೆ ಎನ್ನುವುದು ಇಂದಿನ ಪ್ರಪಂಚವನ್ನು ನೋಡುವಾಗಲೇ ತಿಳಿಯುತ್ತದೆ. ಆದರೆ ನಾವು ಅಹಂಕಾರ ರಹಿತವಾದ ಜೀವನ ನಡೆಸಬೇಕು. ಆಗ ಜೀವನದಲ್ಲಿ ಮೇಲೆ ಏರಲು ಸಾಧ್ಯ. ದ್ವಾರಕಾ ಪ್ರತಿಷ್ಠಾನ ಇಂತಹ ಕಾರ್ಯಕ್ಕೆ ವೇದಿಕೆ ನೀಡಿದೆ. ಮನೆಯನ್ನು ಕಟ್ಟಿಕೊಡುವ ಜೊತೆಗೆ ಮನವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ದ್ವಾರಕಾ ಉದ್ಯಮಿ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾಸರಗೋಡು ನೆಕ್ರಂಪಾರೆ ಸ್ಕಂದ ಪ್ಲಾಸ್ಟಿಕ್ಸ್’ನ ಮುರಳೀಕೃಷ್ಣ ಮಾತನಾಡಿ, ಉದ್ಯಮದ ಜೊತೆಗೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವವರು ತುಂಬಾ ಕಡಿಮೆ. ಗೋಪಾಲಕೃಷ್ಣ ಅವರು ಈ ಕಾರ್ಯ ಮಾಡಿದ್ದಾರೆ. ಅವರನ್ನು ಅಭಿನಂಧಿಸಬೇಕು.
ಗ್ರಂಥ ಅನಾವರಣ:
ಹರಿಕೃಷ್ಣ ಭಟ್ಟ ಅರ್ತ್ಯಡ್ಕ ರಚಿಸಿರುವ ಉತ್ತರನ ಜಂಬ, ಭಕ್ತಿ ತರಂಗ, ಒಗಟಿನ ಕೈಚೀಲ ಹಾಗೂ ನವೀನಕೃಷ್ಣ ಎಸ್. ಉಪ್ಪಿನಂಗಡಿ ರಚಿಸಿರುವ ಬಾಳಿನ ಬುತ್ತಿ ಕೃತಿಯನ್ನು ರಾಮಕುಂಜದ ನಿವೃತ್ತ ಪ್ರಾಂಶುಪಾಲ ಗಣರಾಜ ಕುಂಬ್ಳೆ ಅವರು ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಗಣರಾಜ ಕುಂಬ್ಳೆ, ಮಾರಾಟದ ಉದ್ದೇಶದಿಂದ ದ್ವಾರಕಾ ಪ್ರತಿಷ್ಠಾನ ಪುಸ್ತಕ ಪ್ರಕಟಿಸುತ್ತಿಲ್ಲ. ಬದಲಾಗಿ ಉಚಿತವಾಗಿ ನೀಡಲು, ಕಾರ್ಯಕ್ರಮದಲ್ಲಿ ಸ್ಮರಣಿಕೆಯಾಗಿ ನೀಡಲು ಪ್ರಕಟಿಸುತ್ತಿದೆ ಎಂದರು.
ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ರಾಮಾಯಣ, ಮಹಾಭಾರತ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬಹುಮಾನ, ಪುರಸ್ಕಾರ ನೀಡಲಾಯಿತು.
ಪುತ್ತೂರು ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು.
ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ವಿಘನೇಶ್ ಹಿರಣ್ಯ ವಂದಿಸಿದರು. ನವೀನ್ ಕೃಷ್ಣ ಎಸ್. ಮತ್ತು ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.






















