ಪುತ್ತೂರು: ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಗಳಲ್ಲಿ ಒಂದಾದ ಮೆಡಿಕಲ್ ಕಾಲೇಜಿಗೆ ಆರ್ಥಿಕ ಇಲಾಖೆ ಸಮ್ಮತಿ ನೀಡಿದೆ. ನಮ್ಮ ಮಹತ್ವಪೂರ್ಣ ಯೋಜನೆಯ ಮುಂದಿನ ಕೆಲಸಗಳ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕನಾದ ನಂತರ ನಿರಂತರವಾಗಿ ಬೇಡಿಕೆ ಇಡುತ್ತಿದ್ದೆ. ಸಿಎಂ ಹಾಗೂ ಡಿಸಿಎಂ ಪೂರಕವಾಗಿ ಸ್ಪಂದಿಸಿ, ಇರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಿ, ವೈದ್ಯಕೀಯ ಆಸ್ಪತ್ರೆ ಮಂಜೂರು ಮಾಡಿದ್ದರು ಎಂದರು.
ಇದರ ನಡುವೆ ಬೇಕಾದಷ್ಟು ಟೀಕೆ ಟಿಪ್ಪಣಿಗಳು ಬಂದಿತ್ತು. ಮೆಡಿಕಲ್ ಕಾಲೇಜು ಬರುವುದಿಲ್ಲ. ಅದು ಬರೀಯ ಪುಸ್ತಕಕ್ಕಷ್ಟೇ ಸೀಮಿತ ಎಂದಿದ್ದರು. ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರು.
ಅನೇಕರು ನನಗೆ ವೈಯಕ್ತಿಕವಾಗಿ – ಆ ಪ್ರಯತ್ನ ಕೈಬಿಡಿ ಎಂದಿದ್ದರು. ಜಿಲ್ಲಾ ಕೇಂದ್ರಕ್ಕಷ್ಟೇ ವೈದ್ಯಕೀಯ ಕಾಲೇಜು ಮಂಜೂರಾಗ್ತದೆ. ತಾಲೂಕು ಕೇಂದ್ರಕ್ಕೆ ಮಂಜೂರಾಗುವುದಿಲ್ಲ ಎಂದಿದ್ದರು. ಅದೇನೆ ಇದ್ದರು ನನ್ನ ಪ್ರಯತ್ನ ಬಿಡಲಿಲ್ಲ. ಇಂದು ಕೂಡ ಶ್ರೀ ಮಹಿಷಮರ್ಧಿನಿ ದೇವಸ್ಥಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಚರ್ಚಿಗೆ ತೆರಳಿ ಪ್ರಾರ್ಥಿಸಿದ್ದೇನೆ.
ಇಲಾಖೆಯಿಂದ ಸುಮಾರು 1 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಸೇಡಿಯಾಪಿನಲ್ಲಿ ಜಾಗ ಮೀಸಲಿಡಲಾಗಿದೆ. ಆರೋಗ್ಯ ಇಲಾಖೆಯಲ್ಲಿದ್ದ ಕಡತವನ್ನು ಮೆಡಿಕಲ್ ಎಜುಕೇಷನ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದು ಮುಂದಿನ ಯೋಜನೆಗಳಿಗೆ ಸುಲಭವಾಗುತ್ತದೆ. ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಇದರಲ್ಲಿ ತುಳು ಮಾತನಾಡುವವರಿಗೆ ಆದ್ಯತೆ ನೀಡಲಾಗುವುದು. ನಾವು ಹೇಳಿದ ಕೆಲಸವನ್ನು ಕಾರ್ಯಗತ ಮಾಡುವಲ್ಲಿ ಶ್ರಮಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಪ್ರ ಕಾರ್ಯದರ್ಶಿ ಮಹಮ್ಮದ್, ಕಾವು, ಉಮಾನಾಥ್ ಶೆಟ್ಟಿ, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನಸ್ ಉಪಸ್ಥಿತರಿದ್ದರು.
























