ಪುತ್ತೂರು: ಜಿಎಲ್ ಆಚಾರ್ಯ ಜನ್ಮಶತಾಬ್ದಿಯ ಅಂಗವಾಗಿ ಶಿಕ್ಷಕ ಕವಿಗಳಿಗಾಗಿ ಅಂತಾರಾಜ್ಯ ಮಟ್ಟದ ಆಚಾರ್ಯ ಕವಿಗೋಷ್ಠಿ ಹಾಗೂ ಸಾಹಿತಿ ಜಯಾನಂದ ಪೆರಾಜೆ ಸಂಪಾದಕತ್ವದ ಭಗವದ್ಗೀತೆಯ ಬಗ್ಗೆ ಕವಿಗಳಿಂದ ರಚಿತವಾದ ಗೀತಾ ಫಲ ಕೃತಿ ಬಿಡುಗಡೆ ಸಮಾರಂಭ ಆ. 4ರಂದು ಮಧ್ಯಾಹ್ನ 2 ಗಂಟೆಗೆ ಪುತ್ತೂರಿನ ರೋಟರಿ ಜಿ.ಎಲ್. ಸಭಾಭವನದಲ್ಲಿ ನಡೆಯಲಿದೆ.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹುಬ್ಬಳ್ಳಿ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮಂಗಳೂರು ಕಥಾ ಬಿಂದು ಪ್ರಕಾಶನ, ಪುತ್ತೂರು ಸ್ವರ್ಣೋದ್ಯಮಿ ಜಿ.ಎಲ್. ಆಚಾರ್ಯ ಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮಾರಂಭದ ದೀಪೋಜ್ವಲನೆಯನ್ನು ಸ್ವರ್ಣೋದ್ಯಮಿ ಜಿ.ಎಲ್. ಬಲರಾಮ ಆಚಾರ್ಯ ಅವರು ನೆರವೇರಿಸಲಿದ್ದಾರೆ. ಹಿರಿಯ ಪತ್ರಕರ್ತ, ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ ಅಧ್ಯಕ್ಷತೆ ವಹಿಸುವರು. ಶಿಕ್ಷಣ ಸೌರಭ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಅವರು ಕವನ ಸಂಕಲನ ಅನಾವರಣಗೊಳಿಸಲಿದ್ದಾರೆ. ಸಾಹಿತಿ, ಕಬಕ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಡಾ. ಶಾಂತಾ ಪುತ್ತೂರು ಮುಖ್ಯಅತಿಥಿಯಾಗಿರುವರು. ಕಾದಂಬರಿಕಾರ, ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಶುಭಾಶಂಸನೆಗೈಯಲಿದ್ದಾರೆ.
ಮಧ್ಯಾಹ್ನ 1.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ವಾಣಿಶ್ರೀ ಸಾರಥ್ಯದ ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ನೇತೃತ್ವದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.