ಪುತ್ತೂರು: ಹೆದ್ದಾರಿ ಬದಿಯ ಅಂಗಡಿಯಲ್ಲಿದ್ದ ವೃದ್ದೆಯ ಚಿನ್ನದ ಸರ ಸೆಳೆದು ಪರಾರಿಯಾಗಲು ಯತ್ನಿಸಿದ ಬೆಂಗಳೂರು ಮೂಲದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಪ್ಪಿನಂಗಡಿ ಬಳಿಯ ಅಡ್ಡಹೊಳೆ ಎಂಬಲ್ಲಿ ನಡೆದಿದೆ.
ನೆಲ್ಯಾಡಿ ಬಳಿಯ ಅಡ್ಡಹೊಳೆಯ ಹೆದ್ದಾರಿ ಬದಿಯ ಡ್ರೈ ಫ್ರುಟ್ಸ್ ಅಂಗಡಿಯಲ್ಲಿ ಒಂಟಿಯಾಗಿದ್ದ ವೃದ್ಧ ಮಹಿಳೆ ತ್ರೇಸ್ಯಮ್ಮ (60) ಅವರ ಕುತ್ತಿಗೆಯಲ್ಲಿದ್ದ ಸರವನ್ನು ಸೆಳೆದು ಯುವಕರು ಪರಾರಿಯಾಗಲು ಯತ್ನಿಸಿದ್ದರು. ಮಹಿಳೆಯ ಬೊಬ್ಬೆ ಕೇಳಿ ಸ್ಥಳೀಯರು ಸೇರಿದ್ದು ಯುವಕರನ್ನು ಹಿಡಿದು ಥಳಿಸಿದ್ದಾರೆ.
ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯಕ್ಕೆ ಕದ್ದು ತಂದಿದ್ದ ಸ್ಕೂಟಿಯನ್ನು ಬಳಸಿದ್ದರು. ಮಂಗಳೂರಿನಲ್ಲಿ ವಾಹನ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿಯೊಂದಿಗೆ ಪರಾರಿಯಾಗಿದ್ದ ಖದೀಮರು ಸರಗಳ್ಳತನಕ್ಕೆ ಅದೇ ಸ್ಕೂಟರ್ ಬಳಸಿದ್ದಾರೆ ಎಂಬುದು ಪತ್ತೆಯಾಗಿದೆ. ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.