ಸ್ಥಳೀಯ

ಪುತ್ತೂರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಪುತ್ತೂರಿಗೆ ಭೇಟಿ ನೀಡಿದ್ದು,ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಸಂತ್ರಸ್ತೆ ಯುವತಿಗೆ ಶಿಕ್ಷಣ ಮುಂದುವರಿಸಲು ಪ್ರೋತ್ಸಾಹ ನೀಡಿದ ಅವರು, ಅಗತ್ಯವಾದ ಎಲ್ಲಾ ಸಹಾಯವನ್ನು ಮಹಿಳಾ ಆಯೋಗದ ಮೂಲಕ ಒದಗಿಸುವುದಾಗಿ ಭರವಸೆ ನೀಡಿದರು.

Shani-pooja

ಮಹಿಳಾ ಆಯೋಗವು ಸಂತ್ರಸ್ತ ಮಹಿಳೆಯರ ಪರ ತಾಯಿಯಂತೆ ನಿಲ್ಲುತ್ತದೆ. ಅವರ ಸಂಕಷ್ಟಗಳಿಗೆ ಸ್ಪಂದಿಸಿ ಅಗತ್ಯ ಸಹಾಯ ನೀಡಲಾಗುವುದು ಎಂದು ಅವರು ಹೇಳಿದರು. ಯುವತಿಯ ಮುಂದಿನ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಆಕೆಯನ್ನು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಢಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದರು. ಪ್ರಕರಣ ನ್ಯಾಯಾಲಯದ ಮುಂದೆ ಇರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.

ಇನ್ನು, ಧರ್ಮಸ್ಥಳ ಗ್ರಾಮದಿಂದ ಕಾಣೆಯಾಗಿದ್ದಾರೆ ಎಂದು ಹೇಳಲಾಗುವ ಯುವತಿಯರು ಹಾಗೂ ಮಹಿಳೆಯರ ಕುರಿತು ಸಂಪೂರ್ಣ ಮಾಹಿತಿ ಸಿಗಬೇಕು. ಈ ವಿಷಯದಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದ ಬಗ್ಗೆ ಮಹಿಳಾ ಆಯೋಗ ಈಗಾಗಲೇ ವರದಿ ಕೇಳಿರುವುದಾಗಿ ತಿಳಿಸಿದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಲವು ಬಾರಿ ಸಭೆಗಳನ್ನೂ ನಡೆಸಲಾಗಿದೆ ಎಂದು ಹೇಳಿದರು.

ಕಾಣೆಯಾದವರು ಎಲ್ಲಿಗೆ ಹೋದರು, ಅವರು ಸಾವಿಗೀಡಾಗಿದ್ದರೆ ಅದು ಹೇಗೆ ಸಂಭವಿಸಿತು ಎಂಬುದರ ಕುರಿತು ಸ್ಪಷ್ಟ ಮಾಹಿತಿ ದೊರಕಬೇಕಿದೆ. ಇದು ಕಷ್ಟದ ಕೆಲಸವಾದರೂ ಸತ್ಯ ಹೊರಬರಬೇಕು ಎಂದು ಅವರು ಹೇಳಿದರು.ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ಪೋರ್ನೋಗ್ರಫಿ, ನಶೆ ಪದಾರ್ಥಗಳ ಬಳಕೆ ಹಾಗೂ ಸ್ಮಾರ್ಟ್‌ಫೋನ್‌ಗಳ ದುರುಪಯೋಗವೂ ಕೆಲ ಸಂದರ್ಭಗಳಲ್ಲಿ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹಾಗೂ ಅವುಗಳನ್ನು ತಡೆಗಟ್ಟಲು ಕೈಗೊಂಡ ಕ್ರಮಗಳ ಕುರಿತು ಪೊಲೀಸರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ನಂತರ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಇರುವ ಹಸಿ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಅವರು ಅಲ್ಲಿ ವ್ಯಾಪಾರ ನಡೆಸುತ್ತಿರುವ ಮಹಿಳೆಯರ ಸಮಸ್ಯೆಯನ್ನು ಆಲಿಸಿದರು. ನೂತನವಾಗಿ ನಿರ್ಮಾಣಗೊಂಡಿರುವ ಮೀನು ಮಾರುಕಟ್ಟೆಯಲ್ಲಿ ಗಾಳಿ ಹಾಗೂ ಬೆಳಕಿನ ಸೂಕ್ತ ವ್ಯವಸ್ಥೆಯ ಕೊರತೆ ಇದ್ದು, ಬಾಡಿಗೆ ದರ ಕೂಡ ಹೆಚ್ಚಾಗಿದೆ ಎಂದು ಅವರು ದೂರಿದರು. ಈ ಕಾರಣದಿಂದ ತಮ್ಮ ವ್ಯಾಪಾರವನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರಿಸಲು ನಿರಾಕರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ಸಮಸ್ಯೆಯನ್ನು ಜಿಲ್ಲಾಧಿಕಾರಿ ಹಾಗೂ ಸರಕಾರದ ಗಮನಕ್ಕೆ ತರುವುದಾಗಿ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ನಡೆಯುವ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಅವರು ಹೇಳಿದರು. ಮೀನುಗಾರ ಮಹಿಳೆಯರು ಲಿಖಿತವಾಗಿ ನೀಡುವ ಬೇಡಿಕೆಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲು ಸರಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು

 

 

 

 

 

=


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 121