ಪುತ್ತೂರು: ನೆಲ್ಲಿಕಟ್ಟೆ ಮಿತ್ರ ಮಂಡಳದ ಐವತ್ತನೇ ವರ್ಷದ ಅಂಗವಾಗಿ ಸುವರ್ಣ ಸಂಭ್ರಮ 2026 ವಿವಿಧ ಕಾರ್ಯಕ್ರಮಗಳೊಂದಿಗೆ ಪುತ್ತೂರು ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಅವರು ನೆಲ್ಲಿಕಟ್ಟೆ ಮಿತ್ರ ಮಂಡಲದ 50ನೇ ಸುವರ್ಣ ಮಹೋತ್ಸವದ ಲೋಗೋ ಅನಾವರಣ ಮಾಡಿ ಮಾತನಾಡಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಯ ಕನಸು ನಮ್ಮದಾಗಿದೆ. ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಮಂಗಳೂರಿಗೆ, ದೇವಸ್ಥಾನಗಳಿಗೆ ಹೋಗುವ ಜನರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಬರುವಂತಾಗಲು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವನ್ನು ಪ್ರವಾಸೋದ್ಯಮವನ್ನಾಗಿ ಬದಲಾವಣೆ ಮಾಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಎದುರಿನ ಕೆರೆಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡಿ ಅಲ್ಲಿ ಮೈಸೂರಿನ ಕೆಎಸ್ಆರ್ ನಲ್ಲಿ ಇದ್ದ ಹಾಗೆ ಕಾರಂಜಿ ವ್ಯವಸ್ಥೆ ಮೂಲಕ ಓಂ ನಮಃ ಶಿವಾಯ ಎಂದು ಹೇಳುವಾಗ 70 ಫಿಟ್ ಕಾರಂಜಿ ನೀರು ಹಾರುವ ವ್ಯವಸ್ಥೆ ಮ್ಯೂಸಿಕ್ ನ ಮೂಲಕ ಮಾಡಲಾಗುವುದು ಎಂದು ಅವರು ಹೇಳಿದರು.

ನೆಲ್ಲಿಕಟ್ಟೆ ಮಿತ್ರ ಮಂಡಲದ ಸುವರ್ಣ ಮಹೋತ್ಸವ ದಿನದಂದೆ ನೆಲ್ಲಿಕಟ್ಟೆಯಲ್ಲಿ 280 ಅಡಿ ಎತ್ತರದ ರಾಷ್ಟ್ರಧ್ವಜ ಹಾರಿಸಲಾಗಿದೆ. ಈ ಮೂಲಕ ಇಡೀ ರಾಜ್ಯದಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಹೊಂದಿರುವ ತಾಲೂಕು ಇದ್ದರೆ ಅದು ಪುತ್ತೂರು ಮಾತ್ರ ಎಂದ ಅವರು, ಯಾವುದೇ ಸಂಘಟನೆ ಬೆಳೆಯಬೇಕಾದರೆ ಒಂದಿಷ್ಟು ಜನ ಅದರಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ಕಳೆದ 50 ವರ್ಷಗಳ ಹಿಂದೆ ಸೂತ್ರಬೆಟ್ಟು ಜಗನ್ನಾಥ ರೈ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ನೆಲ್ಲಿಕಟ್ಟೆ ಮಿತ್ರ ಮಂಡಲ ಇಂದು ಹೆಮ್ಮೆರವಾಗಿ ಬೆಳೆದು ನಿಂತಿದೆ. ಮುಂದೆ ಈ ಸಂಘಟನೆ ನೂರು ವರ್ಷಗಳ ಕಾಲ ಇನ್ನಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತಾಗಲು ದೇವರು ಅನುಗ್ರಹಿಸಲಿ ಎಂದು ಹಾರೈಸಿದರು.
ನೆಲ್ಲಿಕಟ್ಟೆ ಪುತ್ತೂರಿನ ರಾಜಧಾನಿ
ಅಧ್ಯಕ್ಷತೆ ವಹಿಸಿದ್ದ ನೆಲ್ಲಿಕಟ್ಟೆ ಮಿತ್ರ ಮಂಡಳದ ಸ್ಥಾಪಕ ಅಧ್ಯಕ್ಷರೂ ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷರು ಆದ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ನೆಲ್ಲಿಕಟ್ಟೆ ಎಂಬುದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಿಂದ ಹಿಡಿದು ಬೆದ್ರಾಳ ತನಕ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆ ಹೊಂದಿರುವ ಮಧ್ಯಮ ವರ್ಗದವರ ಒಂದು ಒಕ್ಕೂಟ. ಇಲ್ಲಿ ಯಾವತ್ತೂ ಪ್ರತಿಯೊಬ್ಬ ಜಾತಿ, ಧರ್ಮದ, ಮನೆಗಳು ಒಂದು ಕುಟುಂಬದ ರೀತಿಯಲ್ಲಿ ಜೀವನ ನಡೆಸಿಕೊಂಡು ಬರಲಾಗುತ್ತಿದೆ. ನೆಲ್ಲಿಕಟ್ಟೆ ಮಿತ್ರ ಮಂಡಲ ಅದೇ ರೀತಿಯ ಮನೋ ಭಾವನೆಯನ್ನು ಬೆಳೆಸಿಕೊಂಡು ಜಾತಿ ಮತದ ಪರಿಯನ್ನು ಮೀರಿ ಒಂದು ಕುಟುಂಬ ಎಂಬ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದ ಕಾರಣ ನೆಲ್ಲಿಕಟ್ಟೆ ಮಿತ್ರ ಮಂಡಲ ಯಶಸ್ಸಿನತ್ತ ಸಾಗಿ ತನ್ನ 50ನೇ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ ಎಂದರು.

ಯು ಆರ್ ಪ್ರಾಪರ್ಟೀಸ್ ಆಡಳಿತ ನಿರ್ದೇಶಕ ಉಜ್ವಲ್ ಪ್ರಭು ಮಾತನಾಡಿ, ಪುತ್ತೂರು ನೆಲ್ಲಿಕಟ್ಟೆ ಮಿತ್ರ ಮಂಡಲದ ಕಾರ್ಯವೈಖರಿ ಶ್ಲಾಘನೀಯ. ಕೆಲವು ಸಮಯದ ಹಿಂದೆ ಬೆದ್ರಾಳದಲ್ಲಿ ಶ್ರೀ ಮಾತಾ ಲೇಔಟ್ ನಲ್ಲಿ ನಡೆದ ನೇಮೋತ್ಸವ ಕಾರ್ಯಕ್ರಮಕ್ಕೆ ಹೊರೆಕಾಣಿಕೆಯ ಜವಾಬ್ದಾರಿಯನ್ನು ನೆಲ್ಲಿಕಟ್ಟೆ ಮಿತ್ರ ಮಂಡಲದ ಸಂಚಾಲಕ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ನೆಲ್ಲಿಕಟ್ಟೆ ಮಿತ್ರ ಮಂಡಲ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಲಕ್ಷ್ಮೀಶ ತಂತ್ರಿಗಳು ಉದ್ಘಾಟಿಸಿ ಶುಭ ಹಾರೈಸಿದರು. ಜಿಎಲ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಬಲರಾಮ್ ಆಚಾರ್ಯ ಅವರು ಶುಭ ಹಾರೈಸಿದರು. ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಪುತ್ತೂರಿನ ಸಂಗಂ ಬ್ರದರ್ಸ್ ಡ್ಯಾನ್ಸ್ ತಂಡದವರಿಂದ ನೃತ್ಯ ವೈಭವ, 7 ಸ್ಟಾರ್ ಮೇಲೋಡಿಸ್ ಮಂಗಳೂರು ಅವರಿಂದ ಗಾಯಕ ಪ್ರಕಾಶ್ ತಂಡದವರಿಂದ ಸಂಗೀತ ರಸ ಸಂಜೆ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮ, ಪುತ್ತೂರಿನ ಎನ್ ವಿ ಸ್ಟುಡಿಯೋ ಅವರಿಂದ ಫಿಲ್ಮ್ ಡ್ಯಾನ್ಸ್ ನಡೆಯಿತು.

ಆರೋಗ್ಯ ತಪಾಸಣಾ ಶಿಬಿರ
ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು ಇವರ ಸಹಯೋಗದಿಂದ ಆರೋಗ್ಯ ತಪಾಸಣಾ ಶಿಬಿರ (ಮಧುಮೇಹ ಹಾಗೂ ರಕ್ತದೊತ್ತಡ) ಮತ್ತು ಕಾಮತ್ ಓಪ್ಟಿಕಲ್ಸ್ ಇದರ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ಶಿಬಿರ ನಡೆಯಿತು.

ಮುಖ್ಯ ಅತಿಥಿಗಳಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ನಿರ್ದೇಶಕ ನವೀನ್ ಭಂಡಾರಿ, ಉದ್ಯಮಿ ಶಿವರಾಮ ಆಳ್ವ ಕುರಿಯ, ಪುತ್ತೂರು ಮಾನಕ ಜೆವೆಲ್ಲರ್ಸ್ ಮಾಲಕ ಸಿದ್ಧನಾಥ್ ಎಸ್ ಕೆ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯಮಿ ರೋಶನ್ ರೈ ಬನ್ನೂರು, ಮುಖ್ಯ ಅತಿಥಿಗಳಾಗಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಪುತ್ತೂರು ಸಿಜ್ಲರ್ ಗ್ರೂಪ್ ನ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಕರ್ನಾಟಕ ಬೀಚ್ ರೆಸ್ಲಿಂಗ್ ಕಮಿಟಿ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ರೋಟರಿ ಕ್ಲಬ್ ಸಿಟಿ ಅಧ್ಯಕ್ಷ ಉಲ್ಲಾಸ್ ಪೈ, ನೆಲ್ಲಿಕಟ್ಟೆ ಮಿತ್ರ ಮಂಡಳದ ಗೌರವ ಸಲಹೆಗಾರ ಜನಾರ್ಧನ ರಾವ್, ಸ್ಯಾಕ್ಸೋಫೋನ್ ವಾದಕ ಪಿ. ಕೆ. ಗಣೇಶ್, ಪುತ್ತೂರು ವಿಘ್ನೇಶ್ವರ ಕನ್’ಸ್ಟ್ರಕ್ಷನ್ ಮಾಲಕ ಸಂದೀಪ್ ನೆಲ್ಲಿಕಟ್ಟೆ, ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷ ನಯನ ರೈ ಪುತ್ತೂರು, ನೆಲ್ಲಿಕಟ್ಟೆ ಮಿತ್ರ ಮಂಡಳದ ಪ್ರಧಾನ ಕಾರ್ಯದರ್ಶಿ ಪಿ.ಎಸ್. ರೋಹಿತ್ ಕುಮಾರ್ ನೆಲ್ಲಿಕಟ್ಟೆ, ಕೋಶಾಧಿಕಾರಿ ಜಗನ್ನಾಥ ಜೋಗಿ ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ, ಗೌರವ:
ಜೀವರಕ್ಷಕ ಈಶ್ವರ್ ಮಲ್ಪೆ, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಜಯ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಮೀನಾಕ್ಷಿ ನಿವೃತ್ತ ಅಂಗನವಾಡಿ ಪರಿಚಾರಕಿ ಕುಸುಮಕ್ಕ ನೆಲ್ಲಿಕಟ್ಟೆ, ಸ್ಮಶಾನ ಪಾಲಕ ಸತೀಶ್ ಮಡಿವಾಳ ಚಿಕ್ಕಪುತ್ತೂರು, ನಿವೃತ್ತ ಸೈನಿಕರುಗಳಾದ ಜೋ ಡಿ’ಸೋಜಾ ಚಿಕ್ಕಪುತ್ತೂರು, ನರಸಿಂಹ ಭಂಡರ್ಕರ್ ನೆಲ್ಲಿಕಟ್ಟೆ ಪುತ್ತೂರು, ಕುಶಾಲಪ್ಪ ಗೌಡ ಚಿಕ್ಕ ಪುತ್ತೂರು, ಎಡ್ವರ್ಡ್ ಡಿ’ಸೋಜಾ ನೆಲ್ಲಿಕಟ್ಟೆ, ಬ್ಲಡ್ ಬ್ಲಡ್ ಗ್ರೂಪಿನ ಶರತ್ ಕುಮಾರ್ ಆಳ್ವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುದರ್ಶನ್ ನ್ಯಾಕ್ ಕಂಪ ಅವರನ್ನು ಗೌರವಿಸಲಾಯಿತು.
ಪುತ್ತೂರು ನೆಲ್ಲಿಕಟ್ಟೆ ಮಿತ್ರ ಮಂಡಲದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ನೆಲ್ಲಿಕಟ್ಟೆ ಮಿತ್ರ ಮಂಡಳದ ಸಂಚಾಲಕ ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ವರದಿ ವಾಚಿಸಿದರು.
ಶೈಲೇಶ್ ನಾಯ್ಕ್,, ಬಾಲಕೃಷ್ಣ ನಾಯ್ಕ್, ಅಭಿಲಾಶ್ ಪೂಜಾರಿ, ಶ್ರೀನಾಥ್ ರಾವ್, ದೇವಿ ಪ್ರಸಾದ್ ಶೆಟ್ಟಿ, ವಿನೀತ್ ರೈ, ಉದಯ ಕುಮಾರ್ ರಾವ್, ಪ್ರಮೋದ್ ಕುಮಾರ್, ವಿಲಿಯಂ ನೆಲ್ಲಿಕಟ್ಟೆ, ರಿಚರ್ಡ್ ನೆಲ್ಲಿಕಟ್ಟೆ, ಗಂಗಾಧರ ನಾಯ್ಕ್ ಬಂಜಾರ, ಅನಿಲ್ ಡಿಸೋಜಾ, ಪೂರ್ಣಮ್ ಶೆಟ್ಟಿ, ಸುಶಾಂತ್ ರೈ, ಶಶಿಕಾಂತ ರಾವ್, ಅಶ್ರಫ್ ಕಟ್ಲೆರಿ, ಚೇತನ್ ಪೂಜಾರಿ, ಸತೀಶ್ ಶೆಟ್ಟಿ, ಪ್ರಸಾದ್ ಗೋಪಾಲಕೃಷ್ಣ ಪಾಟಾಳಿ, ಕಣ್ಣನ್ ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.





















