ಧಾರ್ಮಿಕಸ್ಥಳೀಯ

ಯೋಗ, ಭಾಗ್ಯಕ್ಕಾಗಿ ದೇವಸ್ಥಾನದ ಕಾರ್ಯದಲ್ಲಿ ಕೈಜೋಡಿಸಿ | ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರದ ಪೂರ್ವಭಾವಿ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹುಟ್ಟುವಾಗ ಯೋಗ ಸಿಕ್ಕಿರುತ್ತದೆ. ಹುಟ್ಟಿದ ನಂತರ ಭಾಗ್ಯ ಸಿಗುವುದು. ಯೋಗ ಹಾಗೂ ಭಾಗ್ಯವನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಜೀರ್ಣೋದ್ಧಾರಕ್ಕೆ ಸಿದ್ಧಗೊಳ್ಳುತ್ತಿರುವ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ದೇವಸ್ಥಾನದ ಬ್ರಹ್ಮಕಲಶ, ಜೀರ್ಣೋದ್ಧಾರದಂತಹ ಪುಣ್ಯದ ಕಾರ್ಯ ಎಲ್ಲರಿಗೂ ಸಿಗುವುದಿಲ್ಲ. ಅದು ಸಿಕ್ಕಿತೆಂದರೆ ನಮ್ಮ ಯೋಗ ಹಾಗೂ ಭಾಗ್ಯ. ಆದ್ದರಿಂದ ಇಂತಹ ಪುಣ್ಯದ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಂಡು, ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಡುವಂತಾಗಲಿ ಎಂದು ಹಾರೈಸಿದರು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಹಳ ಸುಂದರವಾಗಿದೆ. ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಉತ್ತಮವಾಗಿ ಕೆಲಸವೂ ನಡೆಯುತ್ತಿದೆ. ಕರಸೇವೆಯೂ ನಡೆಯುತ್ತಿರುವುದು, ದೇವಸ್ಥಾನದ ಚೈತನ್ಯ ಇಮ್ಮಡಿಗೊಳಿಸುವಂತೆ ಮಾಡಿದೆ. ಆದರೆ ದೇವಸ್ಥಾನಗಳಿಗೆ ಸೂಕ್ತ ಅನುದಾನ ನೀಡಲು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಕೊರತೆಯಿದೆ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ದೇವಸ್ಥಾನಗಳಿಗೆ ಸಾಕಷ್ಟು ಅನುದಾನ ನೀಡಿದ್ದರು. ಆದರೆ ಈಗ ಅದು ಆಗುತ್ತಿಲ್ಲ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ನಾವೆಲ್ಲ ಒಂದಾಗುವ ಸಂದೇಶ ದೇವಸ್ಥಾನಗಳಿಂದ ಆಗುತ್ತಿದೆ. ಭಗವಂತನು ಭಕ್ತರ ಭಕ್ತಿ, ಶ್ರದ್ಧೆಯಿಂದ ಸಂಪ್ರೀತನಾಗುವ ಕಾರ್ಯವನ್ನು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸುತ್ತಿದ್ದೀರಿ ಎಂದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಪುತ್ತೂರು ಪೇಟೆಗೆ ಹತ್ತಿರದಲ್ಲಿರುವ ದೇವಸ್ಥಾನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ಈಗಾಗಲೇ ಆಮಂತ್ರಣ ಪತ್ರದ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಮುಂದೆ ಪ್ರತಿ ಮನೆಗೂ ಆಮಂತ್ರಣವನ್ನು ತಲುಪಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುವಂತಾಗಬೇಕು ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಸಂಜೀವ ಪೂಜಾರಿ ಕೂರೇಲು, ಡಾ.ಸುರೇಶ್ ಪುತ್ತೂರಾಯ, ಗೋಪಾಲಕೃಷ್ಣ ಭಟ್, ಡಾ. ಸತೀಶ್ ಎ.ಪಿ. ಮರಿಕೆ, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ಕೋಶಾಧಿಕಾರಿ ವಿಜಯ್ ಬಿ.ಎಸ್., ಉಪಾಧ್ಯಕ್ಷರಾದ ಸದಾನಂದ ಶೆಟ್ಟಿ ಕೂರೇಲು, ಮಹಾಬಲ ರೈ ವಳತ್ತಡ್ಕ, ಸೀತಾರಾಮ ರೈ ಕೈಕಾರ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಮೊದಲಾದವರು ಉಪಸ್ಥಿತರಿದ್ದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು ಸ್ವಾಗತಿಸಿ, ವಂದಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders

Related Posts

1 of 3