ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ.
11 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಡಲಾಗಿದ್ದು, ಮುಂಗಡವಾಗಿ 5 ಲಕ್ಷ ರೂ. ಕಮಿಷನ್ ಪಡೆಯುವಾಗ ಶಾಸಕ ಸೇರಿದಂತೆ ಪಿಎಗಳಾದ ಮಂಜುನಾಥ್ ಮತ್ತು ಗುರು ಸಿಕ್ಕಿಬಿದ್ದಿದ್ದು, ಮೂವರನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ.
ಸಣ್ಣ ನೀರಾವರಿ ಇಲಾಖೆಯ ಕ್ಲಾಸ್ 1 ಗುತ್ತಿಗೆದಾರ ವಿಜಯ್ಗೆ ಲಂಚ ನೀಡಲು ಒತ್ತಾಯಿಸಲಾಗಿದೆ. ರಸ್ತೆ ಬದಿ ತಡೆಗೋಡೆ ನಿರ್ಮಾಣದ ಕಾಮಗಾರಿ ವಹಿಸಲು 11 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಡಲಾಗಿದೆ. ಆದರೆ 5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಶಾಸಕ ಚಂದ್ರು ಮತ್ತು ಇಬ್ಬರು ಪಿಎಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಚಂದ್ರು ಲಮಾಣಿಗೆ ಸೇರಿದ ಬಾಲಾಜಿ ಆಸ್ಪತ್ರೆ ಮೇಲೂ ಲೋಕಾಯುಕ್ತ ದಾಳಿ ಮಾಡಿ ಪರಿಶೀಲನೆ ಮಾಡಿದೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.
ಇದು ಗುತ್ತಿಗೆದಾರರ ಹೋರಾಟಕ್ಕೆ ಸಿಕ್ಕಿರುವ ಜಯ: ಮಂಜುನಾಥ್
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿಕೆ ನೀಡಿದ್ದು, ಶಾಸಕರೇ ಈ ರೀತಿಯ ಕೆಲಸಕ್ಕೆ ಇಳಿಯಬಾರದು. ನಾವು ಮಾಡುತ್ತಿದ್ದ ಕಮಿಷನ್ ಆರೋಪಕ್ಕೆ ಸಾಕ್ಷಿ ಸಿಕ್ಕಂತೆ ಆಗಿದೆ. ಇದು ಗುತ್ತಿಗೆದಾರರ ಹೋರಾಟಕ್ಕೆ ಸಿಕ್ಕಿರುವ ಜಯ. ದೂರುದಾರ ಗುತ್ತಿಗೆದಾರನ ಬೆಂಬಲಕ್ಕೆ ನಮ್ಮ ಸಂಘ ಇರಲಿದೆ ಎಂದು ಹೇಳಿದ್ದಾರೆ.





















