ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ,ಸಮುದಾಯ ಆಸ್ಪತ್ರೆ ಹಾಗೂ ಪ್ರಾಥ ಮಿಕ ಆರೋಗ್ಯ ಕೇಂದ್ರಗಳಿಗೆ “ರೇಬಿಸ್’ ನಿರೋಧಕ ಲಸಿಕೆ ಸ್ವಲ್ಪ ಸಮಯದಿಂದ ಪೂರೈಕೆ ಯಾಗುತ್ತಿಲ್ಲ. ಇದರಿಂದಾಗಿ ನಾಯಿ ಕಡಿತಕ್ಕೊಳಗಾದವರು ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯ ವೈದ್ಯರು, ಸಿಬಂದಿ ಚುಚ್ಚು ಮದ್ದು ಲಸಿಕೆ ನೀಡಲು ಪ್ರಯಾಸ ಪಡುವಂತಾಗಿದೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲಿ ಭಾರೀ ಸಮಸ್ಯೆ ಉಂಟಾಗುತ್ತಿದೆ. ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳು ಬೇರೆ ಅನುದಾನ ಬಳಸಿ ಖಾಸಗಿಯಾಗಿ ಖರೀದಿಸುತ್ತಿದ್ದರೆ, ಪಿಎಚ್‌ಸಿಗಳಲ್ಲಿ ಅದಕ್ಕೂ ಅನುದಾನದ ಕೊರತೆ ಇದೆ. ಎಲ್ಲ ಜಿಲ್ಲೆ, ತಾಲೂಕು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ನೋಂದಾಯಿತ ಕಂಪೆನಿಯೊಂದು ಔಷಧ ಖರೀದಿಸುವ ಹಾಗೂ ವಿತರಿಸುವ ನೋಡಲ್ ಏಜೆನ್ಸಿಯಾಗಿದೆ. ಇದು ಸರಕಾರಿ ಆಸ್ಪತ್ರೆಗಳಿಗೆ ಇತ್ತೀಚಿನ ದಿನಗಳಲ್ಲಿ ರೇಬಿಸ್ ನಿರೋಧಕ ಲಸಿಕೆ ಪೂರೈಸುತ್ತಿಲ್ಲ ಎಂಬ ದೂರಿದೆ.
275 ರೂ ನೀಡಿ ಖರಿದಿ
ಈ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಖಾಸಗಿಯಾಗಿ 5 ಜನಕ್ಕೆ ಕೊಡಬಹುದಾದ 1 ಎಂ.ಎಲ್. ಲಸಿಕೆಗೆ 275 ರೂ. ನೀಡಿ ಖರೀದಿಸುತ್ತಿವೆ. ಅದಕ್ಕೆ ಆಯುಷ್ಮಾನ್ ಭಾರತ್ ಯೋಜನೆಯ ಅನುದಾನ ಬಳಸುತ್ತಿದ್ದು, ಇದಕ್ಕೂ ಸರಕಾರದ ಕೆಟಿಪಿಪಿ ಕಾಯ್ದೆ ಅಡ್ಡಿಯಾಗಿದೆ. ಈ ಅನುದಾನವನ್ನು ಔಷಧಕ್ಕೆ ಬಳಸುವುದರಿಂದ ಆಸ್ಪತ್ರೆಗೆ ಅಗತ್ಯವಿರುವ ಸಲಕರಣೆ, ಪೀಠೋಪಕರಣ, ಅಗತ್ಯ ವಸ್ತುಗಳ ಖರೀದಿಗೆ ಸಮಸ್ಯೆಯಾಗುತ್ತಿದೆ ಎನ್ನುವುದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಹೇಳುತ್ತಾರೆ. ಎಲ್ಲೆಡೆ ನಾಯಿ ಕಡಿತ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಹಾಗಾಗಿ ಔಷಧ ಕೊರತೆ ಇದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೇ, ಜನ ತೊಂದರೆ ಅನುಭವಿಸುವಂತಾಗಿದೆ.
ಔಷಧ ಪೂರೈಕೆಗೆ ಇಲಾಖೆಯಲ್ಲಿ ಅನುದಾನದ ಕೊರತೆಯಿಲ್ಲ. ಈಗಾಗಲೇ ಸರಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆಗೆ ಕೆಎಸ್‌ಎಂಎಸ್‌ಸಿಎಲ್ ಏಜೆನ್ಸಿಗೆ ಜವಾಬ್ದಾರಿ ಕೊಡಲಾಗಿದೆ. ರೇಬಿಸ್ ನಿರೋಧಕ ಸಹಿತ ಅಗತ್ಯವಿರುವ ಔಷಧ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದ್ದರೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳ ಲಾಗುವುದು. ಹರ್ಷ ಗುಪ್ತಾ, ಪ್ರ.ಕಾರ್ಯದರ್ಶಿ, ಆರೋಗ್ಯ ಮತ್ತು ಕು.ಕ. ಇಲಾಖೆ
ರಾಜ್ಯದ ಸರಕಾರಿ ಆಸ್ಪತ್ರೆಗಳ ವಿವರ ಜಿಲ್ಲಾಸ್ಪತ್ರೆಗಳು 30
ತಾಲೂಕು ಆಸ್ಪತ್ರೆಗಳು 146
ಸಮುದಾಯ ಆಸ್ಪತ್ರೆಗಳು 204
ಪ್ರಾಥಮಿಕ ಆಸ್ಪತ್ರೆಗಳು 2,310
61 ಉಡುಪಿ ಜಿಲ್ಲೆಯ ಪ್ರಾಥಮಿಕ ಆಸ್ಪತ್ರೆಗಳು
66 ದ.ಕ. ಜಿಲ್ಲೆಯ ಪ್ರಾಥಮಿಕ ಆಸ್ಪತ್ರೆಗಳು