ಪುತ್ತೂರು: ಅಂಕಗಳಿಂದ ಬದುಕು ನಿರ್ಧರಿತ ಆಗುವುದಿಲ್ಲ. ವ್ಯಕ್ತಿತ್ವದ ಪರಿಪೂರ್ಣತೆಯೇ ಸರ್ವಾಂಗೀಣ ಬೆಳವಣಿಗೆ ಎಂದು ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಳ್ವಾಸ್ ಫಾರ್ಮಸಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗ್ರೀಷ್ಮ ವಿವೇಕ್ ಆಳ್ವ ಹೇಳಿದರು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ ವಿವೇಕ ಪ್ರದೀಪ್ತಿ 2025ರಲ್ಲಿ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜೀವನದಲ್ಲಿ ನಾವು ಸಾಗುವ ಹಾದಿಯು ಅಷ್ಟು ಸರಳವಾಗಿಲ್ಲ. ಸುಖದೊಂದಿಗೆ ಕಷ್ಟವು ಜೊತೆಗೂಡಿದಾಗ ಬದುಕಿಗೊಂದು ಮೆರುಗು ಸಿಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ವಿದ್ಯಾರ್ಥಿಯು ತನ್ನಲ್ಲಿರುವ ಅನನ್ಯ ಪ್ರತಿಭೆಯನ್ನು ಗುರುತಿಸಿ ಅದನ್ನು ಬೆಳೆಸುವುದರ ಕಡೆಗೆ ಗಮನಹರಿಸಿದಾಗ ಸಮಾಜ ಅವರನ್ನು ಗುರುತಿಸಿ, ಗೌರವಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಹಿಂದೆ ಅವನ ತಂದೆ, ತಾಯಿಗಳ ಪ್ರೀತಿ, ವಾತ್ಸಲ್ಯ, ಗುರುಗಳ ಪ್ರಯತ್ನ ಇರುತ್ತದೆ. ಯಾವಾಗ ವಿದ್ಯಾರ್ಥಿಗಳು ಅದನ್ನು ಅರ್ಥೈಸಿಕೊಂಡು ಇತರರನ್ನು ಗೌರವಿಸುತ್ತಾರೋ ಆಗ ಅವರ ಜೀವನ ಸಾರ್ಥಿಕವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ಮಾತನಾಡಿ, ವಿದ್ಯಾರ್ಥಿಗಳು ಎಂದಿಗೂ ವಿವೇಕದಿಂದ ವಿಚಲಿತರಾಗಬಾರದು. ಜೀವನದಲ್ಲಿ ಎರಡು ಸವಾಲುಗಳಿವೆ. ಒಂದು ವಯಸ್ಸು, ಇನ್ನೊಂದು ಚೈತನ್ಯ. ಎರಡನ್ನು ಸಮಾನವಾಗಿ ಸರಿದೂಗಿಸಿದಾಗ ಬದುಕು ಹಸನುಗೊಳ್ಳುತ್ತದೆ. ನಮ್ಮ ದೇಶ ವಿಕಸಿತ ಭಾರತವಾಗಬೇಕಾದರೆ ಇಂದಿನ ಪೀಳಿಗೆ ಪ್ರಾಮಾಣಿಕವಾಗಿ ದೇಶಕ್ಕಾಗಿ ದುಡಿಯಲು ಸಿದ್ಧರಾಗಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಯಲ್ಲಿ ಪಡೆದುಕೊಂಡ ಸಂಸ್ಕಾರಭರಿತ ಶಿಕ್ಷಣವನ್ನು ದೇಶ ಕಟ್ಟುವಲ್ಲಿ ಬಳಸಿಕೊಂಡರೆ ದೇಶ ಔನ್ನತ್ಯದ ಶಿಖರವನ್ನು ತಲುಪಬಲ್ಲದು ಎಂದು ಹೇಳಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತಶ್ರೇಣಿಯಲ್ಲಿ ತರ್ಗಡೆ ಹೊಂದಿದ 362 ವಿದ್ಯಾರ್ಥಿಗಳು ಹಾಗೂ ಸಿ.ಇ.ಟಿ, ಜೆ.ಇ.ಇ, ನೀಟ್, ಸಿ.ಎ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಸಚಿನ್ ಶೆಣೈ ಕೆ., ಪ್ರಾಂಶುಪಾಲ ದೇವಿಚರಣ್ ರೈ ಎಂ, ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಸನ್ಮಾನಿತ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡರು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆಂಗ್ಲಭಾಷಾ ಉಪನ್ಯಾಸಕ ಪರಮೇಶ್ವರ ಶರ್ಮಾ ಪಿ.ಕೆ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಕ್ಷಿತಾ ಬಿ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಮಮತಾ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿದರು.























