ಬೆಂಗಳೂರು: ರಾಯರ ಮಠದೊಳಗೆ ಅಪರಿಚಿತೆಯೋರ್ವರು ಚಪ್ಪಲಿ ಎಸೆದು ಪರಾರಿಯಾದ ಘಟನೆ ನಡೆದಿದೆ.
ಭಾನುವಾರ ಬೆಂಗಳೂರಿನ ಇಂದಿರಾನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಘಟನೆ ಜರುಗಿದೆ.
ಬೆಳಗಿನ ಜಾವ ಮಠಕ್ಕೆ ಬಂದಿರುವ ಅಪರಿಚಿತ ಮಹಿಳೆಯೊಬ್ಬಳು ಮಠದ ಕಿಟಕಿಯಿಂದ ಚಪ್ಪಲಿ ಎಸೆದು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾಳೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕೃತ್ಯವನ್ನು ಭಕ್ತರು ಮತ್ತು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ. ಇದು ರಾಯರ ಮಹಾತ್ಮೆಗೆ ಅವಮಾನ ಮಾಡಲು ಈ ಕೃತ್ಯ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ಹಿಂದಿನ ಉದ್ದೇಶ ಏನೆಂಬುದು ತಿಳಿದಿಲ್ಲ. ಮಹಿಳೆ ಚಪ್ಪಲಿ ಎಸೆದಿರುವುದು ಸಿಟ್ಟೋ, ಅಥವಾ ಬೇರೆ ಯಾವುದೋ ಉದ್ದೇಶವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಘಟನೆಯಿಂದ ಭಕ್ತರ ಮನಸ್ಸಿಗೆ ಧಕ್ಕೆಯುಂಟಾಗಿದ್ದು, ರಾಯರ ಮಹಾತ್ಮೆಯ ಬಗ್ಗೆ ಚರಿತ್ರೆಗಳು ಮತ್ತು ಭಕ್ತರ ಅನುಭವಗಳು ಇಂದಿಗೂ ಸ್ಫೂರ್ತಿಯಾಗಿರುವಾಗ ಇಂತಹ ಕೃತ್ಯವು ಸಮಾಜದಲ್ಲಿ ಆತಂಕ ಉಂಟುಮಾಡಿದೆ. ಸ್ಥಳೀಯರು ಈ ಘಟನೆಯನ್ನು ಖಂಡಿಸಿ, ಮಠದ ಪಾವಿತ್ರ್ಯತೆಯನ್ನು ಕಾಪಾಡಲು ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ.