ಬೆಂಗಳೂರು: ಖ್ಯಾತ ಕಲಾವಿದರಾಗಿದ್ದ ದೂರದೃಷ್ಟಿಯ ನೇತಾರ ಟಿ.ವಿ.ದ್ವಾರಕಾನಾಥ್ ಅವರ ಜನ್ಮಶತಮಾನೋತ್ಸವವನ್ನು ವಿಶೇಷ ಸಾಂಸ್ಕೃತಿಕ ಸಂಭ್ರಮಾಚರಣೆ ಮೂಲಕ ಸ್ಮರಣೀಯಗೊಳಿಸಲು ಹೆಸರಾಂತ ನೃತ್ಯಕಲಾವಿದ ದಂಪತಿ ನಿರುಪಮಾ, ರಾಜೇಂದ್ರ ಹಾಗೂ ಅವರ ಕುಟುಂಬದವರು ನಿರ್ಧರಿಸಿದ್ದಾರೆ.
ಮೇ 10ರಂದು ಬೆಳಿಗ್ಗೆ 10.30ಕ್ಕೆ ನಗರದ ಬಸವನಗುಡಿ ಡಿವಿಜಿ ರಸ್ತೆಯಲ್ಲಿರುವ ಅಭಿನವ ಡ್ಯಾನ್ಸ್ ಕಂಪನಿಯ ಆವರಣದಲ್ಲಿ ದ್ವಾರಕಾನಾಥ್ ಅವರ ಪುತ್ಥಳಿಯನ್ನು ನಾಡೋಜ ಡಾ.ಎಸ್.ಆರ್.ರಾಮಸ್ವಾಮಿ ಅನಾವರಣಗೊಳಿಸುವರು. ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಶ್ರೀನಿವಾಸ್ ವರಖೇಡಿ ಮುಖ್ಯ ಅತಿಥಿಯಾಗಿರುವರು. ಪುತ್ಥಳಿಯ ಶಿಲ್ಪಿ ಬಿ.ಸಿ.ಶಿವಕುಮಾರ್ ಅವರನ್ನು ಸನ್ಮಾನಿಸಲಾಗುವುದು.
ಪ್ರಭಾತ್ ಕಲಾವಿದರು ಖ್ಯಾತಿಯ ದ್ವಾರಕಿ, ದ್ವಾರಕಾನಾಥ್ ಅವರು ಪ್ರಭಾತ್ ಕಲಾವಿದರು ಸಂಘಟನೆಯ ಮೂಲಕವೇ ಗುರುತಿಸಿಕೊಂಡ ಮತ್ತು ಅದಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿ ಇಟ್ಟ ಶ್ರೇಷ್ಠ ಕಲಾವಿದರಾಗಿದ್ದರು. ತಮ್ಮ ಬಳಗದಲ್ಲಿ ‘ದ್ವಾರಕಿ’ ಎಂದೇ ಕರೆಸಿಕೊಂಡಿದ್ದ ಅವರು ಆರಂಭಿಸಿದ ಈ ರಂಗ ಗುಂಪು ಇಂದು ನೆಲದ ಸಾಂಸ್ಕೃತಿಕ ಭಾವ ಪ್ರತೀಕದ ತಳಹದಿಯಂತೆ ತನ್ನ ಮಹತ್ವವನ್ನು ಗಳಿಸಿಕೊಂಡಿದೆ. ಹರಿಕಥಾ ವಾಚಕರ ಕುಟುಂಬದಲ್ಲಿ ಹುಟ್ಟಿದ ಅವರು ಕತೆ ಹೇಳುವ ಮತ್ತು ರಂಗದಲ್ಲಿ ಕಲೆ ಪ್ರದರ್ಶಿಸುವ ಮೂಲಕ ನಾಡಿನ ಶ್ರೀಮಂತ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡಿದ ಮಹಾನ್ ದಾರ್ಶನಿಕರಾಗಿದ್ದರು.
ದ್ವಾರಕಾನಾಥ್ ಮತ್ತು ಅವರ ಸಹೋದರರ ನೇತೃತ್ವದಲ್ಲಿ ಪ್ರಭಾತ್ ಕಲಾವಿದರು ಸಂಘಟನೆಯು ಸಾಂಸ್ಕೃತಿಕ ನೃತ್ಯ, ಜಾನಪದ ಸಂಪ್ರದಾಯ ಮತ್ತು ರಂಗಭೂಮಿಯ ಆವಿಷ್ಕಾರಗಳನ್ನು ಒಗ್ಗೂಡಿಸುವ ಮೂಲಕ ಭಾರತೀಯ ಪ್ರದರ್ಶನ ಕಲೆಗಳ ಸೀಮೆಯನ್ನು ಮರುರಚಿಸುವಂತಹ ಕೆಲಸ ಮಾಡಿತ್ತು. ಅವರು ಕುಟುಂಬ ಇದೇ ಪರಂಪರೆಯನ್ನು ಮುಂದುವರಿಸಿದ್ದು, ರಂಗಭೂಮಿ ಹಾಗೂ ಇತರ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ದ್ವಾರಕಾನಾಥ್ ಅವರ ಹಿರಿಯ ಪುತ್ರ ಟಿ.ಡಿ.ಶ್ರೀನಿವಾಸ್ ಅವರು ಕಲಾ ತಂಡದ ಧ್ವನಿ, ಬೆಳಕು, ಕಲಾಮಂದಿರದ ವಿನ್ಯಾಸ ಕಾರ್ಯದಲ್ಲಿ ತೊಡಗಿದ್ದರೆ, ಕಿರಿಯ ಪುತ್ರ ಟಿ.ಡಿ.ರಾಜೇಂದ್ರ ಮತ್ತು ಸೊಸೆ ನಿರುಪಮಾ ರಾಜೇಂದ್ರ ಅವರು ಪ್ರದರ್ಶನ ಕಲೆಗಳಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ. ಇದೇ ಕುಟುಂಬದ ಕುಡಿ ಮಾಲತಿ ವಿಜಯಸಿಂಹ ಶಿಕ್ಷಣ, ಸಂಶೋಧನೆ, ಸಿಎಸ್‌ಆರ್ ಚಟುವಟಿಕೆಗಳಲ್ಲಿ ತೊಡಗಿದ್ದರೆ, ಮೊಮ್ಮಗಳು ರೋಹಿಣಿ ಮತ್ತು ಮರಿ ಸೊಸೆ ಮೇಧವಿನಿ ನೃತ್ಯದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಮೊಮ್ಮಗ ಪೂರ್ಣಪ್ರಜ್ಞ ಅವರು ತಾಂತ್ರಿಕ ಮತ್ತು ರಂಗವಿನ್ಯಾಸ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಮೂಲಕ ಇಡೀ ಕುಟುಂಬವೇ ಕಲೆಗಾಗಿ ತನ್ನನ್ನು ತೊಡಗಿಸಿಕೊಂಡಿದೆ.