ಪುತ್ತೂರು: ಆರ್ಯಾಪು ಹೊಸಮನೆ ಕ್ರಿಕೆಟರ್ಸ್ ಆಶ್ರಯದಲ್ಲಿ ಆರ್ಯಾಪಿನಲ್ಲೇ ಇದೇ ಮೊದಲ ಬಾರಿಗೆ 10 ತಂಡಗಳ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಆರ್ಯಾಪು ಪ್ರೀಮಿಯರ್ ಲೀಗ್ ಫೆ. 8, 9ರಂದು ಕಾರ್ಪಾಡಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹೊಸಮನೆ ಕ್ರಿಕೆಟರ್ಸ್’ನ ಅಧ್ಯಕ್ಷ ಧನುಷ್ ಹೊಸಮನೆ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 8ರಂದು ಬೆಳಿಗ್ಗೆ 8 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸುವರು. ಕ್ರೀಡಾಂಗಣವನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸುವರು. ಶಾಸಕಿ ಭಾಗೀರಥಿ ಮುರುಳ್ಯ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ಫೆ. 9ರಂದು ಸಂಜೆ 5ರಿಂದ ಸಮಾರೋಪ ನಡೆಯಲಿದ್ದು, ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರೆಸ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ಗುಣರಂಜನ್ ಶೆಟ್ಟಿ ಹಾಗೂ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ವಿಶೇಷ ಆಹ್ವಾನಿತರಾಗಿರುವರು ಎಂದರು.
ಫೆ. 7ರಂದು ಸಂಜೆ 5 ಗಂಟೆಗೆ ದರ್ಬೆಯಿಂದ ಕಾರ್ಪಾಡಿ ಕ್ರೀಡಾಂಗಣಕ್ಕೆ ಎಪಿಎಲ್ ಟ್ರೋಫಿಯ ಭವ್ಯ ಮೆರವಣಿಗೆ ನಡೆಯಲಿದೆ. ಒಟ್ಟು 10 ತಂಡಗಳು ಪಂದ್ಯದಲ್ಲಿ ಭಾಗವಹಿಸಲಿವೆ. ಡಾ. ಸುರೇಶ್ ಪುತ್ತೂರಾಯ ಒಡೆತನದ ಟೀಮ್ ವಿಷ್ಣುಮೂರ್ತಿ ಸಂಪ್ಯ, ಗಂಗಾಧರ ಅಮೀನ್ ಹೊಸಮನೆ ಅವರ ಹೊಸಮನೆ ಕ್ರಿಕೇಟರ್ಸ್, ಜಯಂತ್ ಶೆಟ್ಟಿ ಕಂಬ್ಲತ್ತಡ್ಡ ಅವರ ಟೀಮ್ ರತ್ನಶ್ರೀ ಪುತ್ತೂರು, ನಿತಿನ್ ಪಕ್ಕಳ ಅವರ ಶ್ರೀದತ್ತ ಕ್ರಿಕೇಟರ್ಸ್, ಪ್ರೀತಂ ಮೇರ್ಲ ಅವರ ಟೀಮ್ ಎಸ್.ಕೆ.ಸಿ. ಪುತ್ತೂರು, ಬಾಲಚಂದ್ರ ಗೌಡ ಅವರ ಟೀಮ್ ಕಾರ್ಪಾಡಿ, ಶರತ್ ಆಳ್ವ ಅವರ ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ಪುತ್ತೂರು, ಸಂತೋಷ್ ಸುವರ್ಣ ಮೇರ್ಲ ಅವರ ಆರ್ಯನ್ ಮೋನ್’ಸ್ಟರ್ ಮೇರ್ಲ, ಸುರೇಶ್ ಪೆಲತ್ತಡಿ ಅವರ ಸ್ವರ್ಣ ಸ್ಟ್ರೈಕರ್ಸ್, ನರೇಂದ್ರ ನಾಯಕ್ ಮರಕ್ಕ ಅವರ ಮರಕ್ಕ ಚಾಲೆಂಜರ್ಸ್ ತಂಡಗಳು ಭಾಗವಹಿಸಲಿವೆ ಎಂದು ವಿವರಿಸಿದರು.
ಗೆದ್ದ ತಂಡಕ್ಕೆ ಪ್ರಥಮ ಬಹುಮಾನವಾಗಿ 25 ಸಾವಿರ ರೂ. ನಗದು ಹಾಗೂ ಎಪಿಎಲ್ ಟ್ರೋಫಿ, ದ್ವಿತೀಯ ಬಹುಮಾನವಾಗಿ 15 ಸಾವಿರ ರೂ. ಹಾಗೂ ಎಪಿಎಲ್ ಟ್ರೋಫಿ ನೀಡಲಾಗುವುದು ಎಂದರು.
ಝೀ ಕನ್ನಡ ಹಾಗೂ ಕಲರ್ಸ್ ಕನ್ನಡದ ಕರ್ನಾಟಕದ ಹೆಸರಾಂತ ಗಾಯಕರ ಸಮಾಗಮದೊಂದಿಗೆ ಫೆ. 9ರಂದು ಆದಿತ್ಯವಾರ ಸಂಜೆ 6.30ರಿಂದ ಆರ್ಯಾಪು ಮ್ಯೂಸಿಕಲ್ ನೈಟ್ ನಡೆಯಲಿದೆ. ಸಮಾರಂಭಕ್ಕೆ ವಿನೀತ್ ಹಾಗೂ ಸಮತಾ ಅಮೀನ್ ಅವರು ತಾರಾ ಮೆರುಗು ನೀಡಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ, ಧನ್’ರಾಜ್ ಆಚಾರ್ಯ, ಝೀ ಕನ್ನಡ ಸರಿಗಮಪ ಖ್ಯಾತಿಯ ಶರಧಿ ಪಾಟೀಲ್, ಪಲ್ಲವಿ ಪ್ರಭು, ರಜತ್ ಮಯ್ಯ, ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಲೈವ್ ಕನ್’ಸರ್ಟ್ ಎಂಟರ್’ಟೈನ್’ಮೆಂಟ್’ನಲ್ಲಿ ಭಾಗವಹಿಸಲಿದ್ದಾರೆ. ಶಿವಂ ಡ್ಯಾನ್ಸ್ ಅಕಾಡೆಮಿಯ ಸದಸ್ಯರಿಂದ ನೃತ್ಯ ವೈವಿಧ್ಯ ಸಮಾರಂಭದ ಮೆರುಗು ಹೆಚ್ಚಿಸಲಿದೆ. ಶ್ರೇಯಸ್ ಶೆಟ್ಟಿ ಸಮಾರಂಭ ನಡೆಸಿಕೊಡಲಿದ್ದು, ಹಿನ್ನೆಲೆಯಲ್ಲಿ ವಿನಯ್ ರಂಗಧೋಳ್, ರೋಶನ್, ಅರುಣ್ ರಾಯ್, ಶ್ರೀಜಿತ್ ಸರಳಾಯ, ಪ್ರದೀಪ್ ಕಿಗ್ಗಲ್, ಆತ್ಮರಾಮ್, ರೋಶನ್ ಸಹಕರಿಸಲಿದ್ದಾರೆ ಎಂದು ವಿವರಿಸಿದರು.ಹೊಸಮನೆ ಕ್ರಿಕೆಟರ್ಸ್ ಕಾರ್ಯದರ್ಶಿ ಪವನ್ ಶೆಟ್ಟಿ ಕಂಬಳತ್ತಡ್ಡ ಉಪಸ್ಥಿತರಿದ್ದರು.