ಪುತ್ತೂರು: ಧರ್ಮ ಸಂರಕ್ಷಣೆಗೆ ನಿಂತಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಗವಂತನ ಅನುಗ್ರಹವಿದ್ದಾಗ ಎಲ್ಲರಿಗೆ ಒಳಿತು ಪ್ರಾಪ್ತಿಯಾಗುತ್ತದೆ. ಗೋವಿನ ಹಿಂಸೆಯನ್ನು ಶ್ರೀನಿವಾಸ ದೇವರು ಸಹಿಸುವುದಿಲ್ಲ. ಗೋವಿನ ರಕ್ಷಣೆಯ ಮೂಲಕ ಧರ್ಮ ರಕ್ಷಣೆಯ ಕಾರ್ಯ ಸಾಧ್ಯ ಎಂಬುದನ್ನು ಶ್ರೀನಿವಾಸ ದೇವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ನಡೆದ ಶ್ರೀನಿವಾಸ ಕಲ್ಯೋಣೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಎಡನೀರು ಶಂಕರಾಚಾರ್ಯ ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಶ್ರೀನಿವಾಸ ಕಲ್ಯೋಣೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು, ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಗೌರವಾಧ್ಯಕ್ಷರಾದ ಶಶಾಂಕ ಕೊಟೇಚಾ, ಗೋಪಾಲಕೃಷ್ಣ ಭಟ್ ದ್ವಾರಕಾ, ಚಂದಪ್ಪ ಮೂಲ್ಯ, ಸ್ವಾಗತ ಸಮಿತಿಯ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ, ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ, ಕೋಶಾಧಿಕಾರಿ ಉದಯ ಕುಮಾರ್ ರೈ ಎಸ್. ಸಂಪ್ಯ, ಮನೀಶ್ ಕುಲಾಲ್, ಗಣೇಶ್‌ಚಂದ್ರ ಭಟ್ ಮಕರಂದ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ರೈ ಪಂಜಳ ಸಹಕರಿಸಿದರು.
* ಹರಿದು ಬಂದ ಜನಸಾಗರ:
ಕಲ್ಯಾಣೋತ್ಸವವನ್ನು ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಭಕ್ತರು ಹರಿದು ಬಂದಿದ್ದಾರೆ. ಪೆಂಡಾಲ್ ನಲ್ಲಿ ಸುಮಾರು 15ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದ್ದು, ಇದು ಭರ್ತಿಯಾಗಿ ಸಭಾಂಗಣದ ಸುತ್ತ ಭಕ್ತರು ಸಾಲು ಗಟ್ಟಿ ನಿಂತಿದ್ದರು. 30ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ, ಕಲ್ಯಾಣೋತ್ಸವ ವೀಕ್ಷಿಸಿದರು.
ವಿವಿಧ ಕಾರ್ಯಕ್ರಮ:
ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಉದಯಾಸ್ತಮಾನ ಸೇವೆ, ಸುಪ್ರಭಾತ ಸೇವೆ, ತೋಮಲಿಕ ಸೇವೆಗಳು ದೇವರಿಗೆ ನಡೆಯಿತು. ಮಂಗಳ ದ್ರವ್ಯಗಳನ್ನು ಸ್ವಾಮಿಗೆ ಅರ್ಪಣೆ, ದೇವರಿಗೆ ಅಭಿಷೇಕ, ವಿವಿಧ ರೀತಿಯ ಆರಾಧನೆಯನ್ನು ನಡೆಸಲಾಯಿತು. ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು. ರಾಜೋಪಚಾರ ಪೂಜೆಗಳ ಬಳಿಕ ಭಕ್ತರ ಗೋವಿಂದನ ಉದ್ಯೋಷದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಮಹಾಮಂಗಳಾರತಿ ಮೂಲಕ ಕಾರ್ಯಕ್ರಮ ಸಮಾಪ್ತಿಯಾಯಿತು.
25ಮಂದಿ ಆಗಮಿಕರಿಂದ ಕಲ್ಯಾಣೋತ್ಸವ:
ಬೆಳಿಗ್ಗೆ ಸುಪ್ರಭಾತ ಪೂಜೆ, ಮಧ್ಯಾಹ್ನ ಪದ್ಮಾವತಿ ಮಹಾಲಕ್ಷ್ಮೀ ಸಹಿತ ಶ್ರೀನಿವಾಸ ದೇವರಿಗೆ ಮಹಾಪೂಜೆ, ಸಾಯಂಕಾಲ ಶ್ರೀನಿವಾಸ ದೇವರ ಕಲ್ಯಾಣೋತ್ಸವದ ಕುರಿತು ಪ್ರವಚನ, ಚೂರ್ಣಿಕಾ ಮಂಗಳಾಷ್ಟಕಗಳು ನಡೆಯಿತು. ಬೆಂಗಳೂರಿನ ಲಕ್ಷ್ಮೀಪತಿ ಶರ್ಮ ಅವರ ನೇತೃತ್ವದಲ್ಲಿ ಸುಮಾರು 25 ಮಂದಿ ಆಗಮಿಕರು ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು.
ಭಜನೆ – ಸುಡುಮದ್ದು ಪ್ರದರ್ಶನ:
ವಿವಿಧ ಭಜನಾ ತಂಡದಿಂದ ಭಜನಾಮೃತ ಕಾರ್ಯಕ್ರಮ, ಸಂಜೆ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದಿಂದ ಶ್ರೀ ಹರಿಗಾನಾಮೃತ ಕಾರ್ಯಕ್ರಮ ನಡೆಯಿತು. ಭಗವಂತನನ್ನು ಸಂತುಷ್ಠಿಗೊಳಿಸುವ ನಿಟ್ಟಿನಲ್ಲಿ ವಾದ್ಯಗಳಿಗೆ ಹೆಜ್ಜೆಹಾಕಿದರು. ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಸುಮಾರು ೨೦ ನಿಮಿಷ ಸುಡುಮದ್ದು ಪ್ರದರ್ಶನ ನಡೆಯಿತು.
ಜನರ ಭಕ್ತಿಯನ್ನು ಉದ್ದೀಪನ ಮಾಡಿದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ. ಸನಾತನ ಹಿಂದು ಧರ್ಮಕ್ಕೆ ಆದಿ ಅಂತ್ಯವಿಲ್ಲ, ಧಾರ್ಮಿಕ ಕಾರ್ಯಗಳು ನಡೆದಾಗ ಜನರಲ್ಲಿ ಜಾಗೃತಿ ಮೂಡುತ್ತದೆ. ಸಮಾಜದ ಪ್ರತಿಯೊಬ್ಬರೂ ಸಂಘಕರಾಗುವ ಅಗತ್ಯವಿದೆ. ನಂಬಿಕೆ ಗಟ್ಟಿಯಾಗಿದ್ದಾಗ ಧರ್ಮ ದೃಢವಾಗುತ್ತದೆ. ದೇವರು ಬೇಕಾದುದನ್ನು ನಮ್ಮ ಕೈಯಿಂದ ಕಾಲ ಕಾಲಕ್ಕೆ ಮಾಡಿಸುತ್ತಾನೆ.
| ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ
ಎಡನೀರು ಶಂಕರಾಚಾರ್ಯ ಮಠದ