ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಂಗಳವಾರ ಅಕ್ಕಿ, ಬೆಲ್ಲ, ತೊಗರಿಬೇಳೆ, ಕಡ್ಲೆಬೇಳೆ ನೀಡಲಾಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಉಪಸ್ಥಿತಿಯಲ್ಲಿ ದೇವರ ನಡೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್. ಭಟ್ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಮಿತಿಯ ಹರಿಪ್ರಸಾದ್ ನೆಲ್ಲಿಕಟ್ಟೆ, ಭಕ್ತರೇ ಸೇರಿಕೊಂಡು ಸಮಿತಿ ರಚಿಸಿದ್ದೇವೆ. ಕೆಲ ಲೋಪಗಳು ಕಂಡುಬಂದಾಗ ಅದನ್ನು ಸರಿಪಡಿಸುವ ಕೆಲಸ ಮಾಡುತ್ತಾ ಬಂದೆವು. ದೇವರ ದಯೆಯಿಂದ ಅವೆಲ್ಲವೂ ಸರಿಯಾಗುತ್ತಾ ಬಂದಿತು. ಇದರೊಂದಿಗೆ ಸಮಿತಿ ವತಿಯಿಂದ ದೇವಸ್ಥಾನಕ್ಕೆ ಕಿಂಚಿತ್ ಕಾಣಿಕೆ ನೀಡುವ ಸಂಕಲ್ಪ ಮಾಡಿದೆವು. ಅದರ ಪ್ರಕಾರ ಇದು ಮೂರನೇ ಬಾರಿ ಅಕ್ಕಿ, ಬೆಲ್ಲ, ತೊಗರಿಬೇಳೆ, ಕಡ್ಲೆಬೇಳೆ ನೀಡಿದ್ದೇವೆ ಎಂದರು.
ಅನಿಲ್ ಕುಮಾರ್ ಕನ್ನಾರ್ನೂಜಿ ಮಾತನಾಡಿ, ದೇವಸ್ಥಾನದ ಪಾವಿತ್ರ್ಯ ಉಳಿಸುವ ನಿಟ್ಟಿನಲ್ಲಿ ಸಮಿತಿ ಕೆಲಸ. ಇದು ರಾಜಕೀಯ, ಆಡಳಿತ ಸಮಿತಿಯ ವಿರುದ್ಧ ಅಲ್ಲ. ಆ ನಿಟ್ಟಿನಲ್ಲಿ ಲೋಪಗಳು ಕಂಡುಬಂದಾಗ ಅದರ ಬಗ್ಗೆ ಮನವಿ ನೀಡಿದ್ದೇವೆ. ವ್ಯವಸ್ಥೆಗಳು ಸರಿಯಾಗುತ್ತಿದೆ. ಇಂದು ಭಕ್ತರೇ ಸೇರಿಕೊಂಡು ಸಣ್ಣ ಕಾಣಿಕೆ ನೀಡಿದ್ದೇವೆ ಎಂದರು.
ಬಾಲಚಂದ್ರ ಸೊರಕೆ ಮಾತನಾಡಿ, 2014ರಿಂದಲೇ ವೈಯಕ್ತಿಕವಾಗಿ ಮನವಿ ನೀಡುತ್ತಾ ದೇವಸ್ಥಾನದ ಕಾರ್ಯದಲ್ಲಿ ತೊಡಗಿಕೊಂಡಿದ್ದೆ. ಒಂದು ವರ್ಷದ ಹಿಂದೆ ಇದನ್ನು ಸಂರಕ್ಷಣಾ ಸಮಿತಿಯ ಮೂಲಕ ಮಾಡಿಕೊಂಡು ಬರುತ್ತಿದ್ದೇವೆ. ಮೊದಲು ದೇವಳದ ಅಂಗಣಕ್ಕೆ ಚಪ್ಪಲಿ ಹಾಕಿ ಬರ್ತಾ ಇದ್ರು. ಈಗ ಕಡಿಮೆ ಆಗಿದೆ. ಈಗಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
ಮೊದಲ ಬಾರಿ ಒಂದು ಕ್ವಿಂಟಾಲ್ ಅಕ್ಕಿ, ಎರಡನೇ ಬಾರಿ ಎರಡು ಕ್ವಿಂಟಾಲ್ ಅಕ್ಕಿ, ಇದೀಗ ಮೂರನೇ ಬಾರಿ 2.51 ಕ್ವಿಂಟಾಲ್ ಅಕ್ಕಿ ನೀಡಿದ್ದೇವೆ. 60 ಕೆಜಿ ತೊಗರಿಬೇಳೆ, 60 ಕೆಜಿ ಕಡ್ಲೆಬೇಳೆ, 1 ಕ್ವಿಂಟಾಲ್ ಬೆಲ್ಲ. ಇದು ಭಕ್ತರು ನೀಡಿದ ಹಣವನ್ನು ಒಟ್ಟುಗೂಡಿಸಿ ನೀಡಲಾಗುತ್ತಿದೆ ಎಂದರು.
ಸಮಿತಿಯ ಪದ್ಮನಾಭ, ರಾಜೇಶ್ ಸೌಪರ್ಣಿಕಾ, ಜಯರಾಮ ರೈ, ಚಂದ್ರ, ಮನೋಹರ್ ಶೆಟ್ಟಿ ಪಡೀಲ್, ಸಂದೇಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

























