ಹೊಸದಿಲ್ಲಿ: ಶನಿವಾರ ಪ್ರಕಟಗೊಂಡ ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಆಡಳಿತಾರೂಢ ಆಮ್ ಆದ್ಮ ಪಕ್ಷ ಪರಾಭವಗೊಂಡ ನಂತರ, ರವಿವಾರ ದಿಲ್ಲಿ ಮುಖ್ಯಮಂತ್ರಿ ಅತಿಶಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
2020ರ ವಿಧಾನಸಭಾ ಚುನಾವಣೆಯಲ್ಲಿ 70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯಲ್ಲಿ 62 ಸ್ಥಾನಗಳ ಭಾರಿ ಬಹುಮತ ಪಡೆದಿದ್ದ ಆಪ್, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೇವಲ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಹೀನಾಯ ಸೋಲು ಅನುಭವಿಸಿದೆ. ಕಳೆದ ಬಾರಿ ಕೇವಲ 8 ಸ್ಥಾನಗಳಲ್ಲಿ ಸ್ಥಾನಗ ಗೆಲುವು ಸಾಧಿಸಿದ್ದ ಬಿಜೆಪಿ, ಈ ಬಾರಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.
ಆಮ್ ಆದ್ಮ ಪಕ್ಷದ ಬಹುತೇಕ ಘಟಾನುಘಟಿ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದರೆ, ಮುಖ್ಯಮಂತ್ರಿ ಅತಿಶಿ ಅವರು ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿಯನ್ನು ಪರಾಭವಗೊಳಿಸುವ ಮೂಲಕ ದಕ್ಷಿಣ ದಿಲ್ಲಿಯ ಕಲ್ಕಜಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದಾರೆ.