ಅಡಿಲೇಡ್: ನಡು ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಪಾಕ್ ಮೂಲದ ವಿದ್ಯಾರ್ಥಿನಿಗೆ ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ಅಡಿಲೇಡ್ ನಿಂದ ವರದಿಯಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಕಾರು ಚಾಲಕನಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿದೆ ಎನ್ನಲಾಗಿದೆ.
2025ರ ಮೇ 6ರಂದು ರಾತ್ರಿ ಅಡಿಲೇಡ್‌ನ ಹಿಲ್‌ಕ್ರೆಸ್ಟ್‌ನ ನಾರ್ತ್ ಈಸ್ಟ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಈ ದುರ್ಘಟನೆಯಲ್ಲಿ 20 ವರ್ಷದ ಅಷ್ಟನ್ ಫ್ರೆಂಡ್ ಎಂಬಾತನ ಕಾರು ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಪಾಕಿಸ್ತಾನ ಮೂಲದ ವಿದ್ಯಾರ್ಥಿನಿ ಸಾಮಿಯಾ ಮಲಿಕ್ ಮೃತಪಟ್ಟಿದ್ದರು. ಅಪಘಾತ ಎಸಗಿದ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದ.
ವಿಚಾರಣೆ ನಡೆಸಿದ ದಕ್ಷಿಣ ಆಸ್ಟ್ರೇಲಿಯಾದ ಜಿಲ್ಲಾ ನ್ಯಾಯಾಲಯ, ನಿರ್ಲಕ್ಷ್ಯದ ಚಾಲನೆಯಿಂದ ಸಾವು ಸಂಭವಿಸಲು ಕಾರಣವಾದ ಹಾಗೂ ಅಪಘಾತದ ಸ್ಥಳದಲ್ಲಿ ನಿಲ್ಲದೆ ತೆರಳಿದ ಆರೋಪಗಳನ್ನು ಒಪ್ಪಿಕೊಂಡಿದ್ದ ಫ್ರೆಂಡ್‌ಗೆ ಒಂದು ವರ್ಷ, ಮೂರು ತಿಂಗಳು ಮತ್ತು 29 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಎರಡು ವರ್ಷಗಳ ಕಾಲ ಸದ್ವರ್ತನೆಯಿಂದ ಇರುವ ಷರತ್ತಿಗೆ ಆತ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಿದೆ ಎನ್ನಲಾಗಿದೆ.
ಮಂಡಿಯೂರಿ ಪ್ರಾರ್ಥನೆ:
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ, ವಿದ್ಯಾರ್ಥಿನಿ ಸಾಮಿಯಾ ಅವರು ರಸ್ತೆ ಮೇಲೆ ಮಂಡಿಯೂರಿ ಕುಳಿತು ಪ್ರಾರ್ಥನೆ ಮಾಡುತ್ತಿದ್ದ ರೀತಿಯಲ್ಲಿದ್ದರು. ಆದರೆ, ಸಾಮಿಯಾ ರಸ್ತೆಯ ಮಧ್ಯೆ ಆ ರೀತಿ ಕುಳಿತಿದ್ದುದಕ್ಕೆ ನಿಖರವಾದ ಕಾರಣವೇನು ಎಂಬುದು ನ್ಯಾಯಾಲಯದಲ್ಲಿ ಸ್ಪಷ್ಟವಾಗಿರಲಿಲ್ಲ.
ಇದೇ ಸಂದರ್ಭ ಕಾರು ಢಿಕ್ಕಿ ಹೊಡೆದಿದ್ದು, ರಸ್ತೆಯಲ್ಲಿ ಯಾವುದೋ ಪ್ರಾಣಿ ಇರಬೇಕು ಎಂದು ಕಾರು ಚಾಲಕ ತಿಳಿದಿದ್ದನಂತೆ. ಬಳಿಕ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಾಗಲೇ, ತಾನು ಒಂದು ಜೀವವನ್ನು ಬಲಿ ಪಡೆದುಕೊಂಡಿದ್ದೇನೆ ಎಂಬ ಅರಿವು ಆಗಿತ್ತು ಎಂದು ಕೋರ್ಟ್ ಮುಂದೆ ಹೇಳಿಕೆ ನೀಡಿದ್ದ.
ಘಟನೆ ನಡೆದ ಒಂದು ವಾರದ ಬಳಿಕ ಪೊಲೀಸರು ಕಾರು ಚಾಲಕನನ್ನು ಗುರುತಿಸಿ ಬಂಧಿಸಿದ್ದರು. ಅಪಘಾತದ ಸಮಯದಲ್ಲಿ ಫ್ರೆಂಡ್ ಮದ್ಯ ಅಥವಾ ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗಿರಲಿಲ್ಲ ಹಾಗೂ ಅತಿವೇಗದಲ್ಲೂ ವಾಹನ ಚಲಾಯಿಸುತ್ತಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
‘ತಪ್ಪಿನ ಹೊಣೆಯನ್ನು ಜೀವನಪೂರ್ತಿ ಹೊರುತ್ತೇನೆ’
ಮೃತ ವಿದ್ಯಾರ್ಥಿನಿಯ ಕುಟುಂಬದವರಿಗೆ ಓದಿ ಹೇಳಲಾದ ಕ್ಷಮಾಪಣಾ ಸಂದೇಶದಲ್ಲಿ ಫ್ರೆಂಡ್ ತನ್ನ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ. “ನನ್ನಿಂದಾಗಿ ಜೀವವೊಂದು ಕಳೆದುಹೋಗಿದೆ. ಸಾಮಿಯಾ ಅವರ ಕುಟುಂಬ ಮತ್ತು ಆತ್ಮೀಯರಿಗೆ ಉಂಟಾದ ದುಃಖ ಹಾಗೂ ಆಘಾತಕ್ಕಾಗಿ ನಾನು ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ತಪ್ಪುಗಳನ್ನು ಜೀವನಪೂರ್ತಿ ಹೊತ್ತುಕೊಂಡೇ ಬದುಕಬೇಕಾಗುತ್ತದೆ” ಎಂದು ಆತ ಹೇಳಿದ್ದಾನೆ ಎಂದು ಡೈಲಿಮೇಲ್ ವರದಿ ಮಾಡಿದೆ.

























