ಪುತ್ತೂರು: ಸಂಪ್ಯ ಅಕ್ಷಯ ಪದವಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಪದವಿ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆ ಕೃತ್ವ ಫೆಸ್ಟ್ 2026 ಸಂಪನ್ನಗೊಂಡಿತು.

ಅಕ್ಷಯ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ಕಾರ‍್ಯಕ್ರಮ ಉದ್ಘಾಟಿಸಿ, ಪ್ರತಿಭೆಗಳ ಅನಾವರಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳೇ ಆಯೋಜಿಸಿದ ಸ್ಪರ್ಧೆಯ ಸದುಪಯೋಗ ಪಡೆದುಕೊಂಡು ಯಶಸ್ಸನ್ನು ಕಾಣುವಂತಾಗಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಜಯಂತ್ ನಡುಬೈಲು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ದೊರಕಿದ ವೇದಿಕೆಯಲ್ಲಿ ಭಾಗವಹಿಸಿ, ಅದರಿಂದ ಕಲಿತ ಶಿಕ್ಷಣ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ನಾಂದಿಯಾಗಲಿ ಎಂದು ಶುಭಹಾರೈಸಿದರು.
ಇದೇ ವೇಳೆ ಕಾಲೇಜು ವಿದ್ಯಾರ್ಥಿ ಪ್ರತಿನಿಧಿಗಳು ಕೃತ್ವ ವಿನ್ನರ್ಸ್ ಟ್ರೋಫಿಯನ್ನು ಅನಾವರಣಗೊಳಿಸಿದರು.
ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ, ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ. ಶುಭ ಹಾರೈಸಿದರು.
ವೈಯಕ್ತಿಕ ಮತ್ತು ಗುಂಪು ಸೇರಿದಂತೆ 27 ಕಾಲೇಜುಗಳಿಂದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕೃತ್ವ 2026 ಸಂಯೋಜಕ ಗಂಧರ್ವ ಪ್ರಸ್ತಾವಿಕವಾಗಿ ಮಾತನಾಡಿದರು.
ಸಮಾರೋಪ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಂಗಭೂಮಿ ಕಲಾವಿದ, ನಿರೂಪಕ ವಿಜಯ್ ಶೋಭರಾಜ್ ಪಾವೂರ್ ಮಾತನಾಡಿ, ಭಯ ಬಿಟ್ಟು ಬದುಕುವುದನ್ನು ಕಲಿಯಬೇಕು. ಶಿಕ್ಷಣದ ಜೊತೆ ಪ್ರತಿಭೆ ಎನ್ನುವುದು ಕೂಡ ಭವಿಷ್ಯವನ್ನು ನಿರ್ಧರಿಸುತ್ತದೆ. ಜೀವನದಲ್ಲಿ ಕುಗ್ಗದೆ ಮುನ್ನುಗ್ಗಿದರೆ ಗುರಿ ಮುಟ್ಟುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ನೃತ್ಯೋಪಾಸನ ಕಲಾ ಅಕಾಡೆಮಿ ಪುತ್ತೂರು ಇದರ ನೃತ್ಯ ಗುರು ವಿಧುಷಿ ಶಾಲಿನಿ ಆತ್ಮಭೂಷಣ್ ಮಾತನಾಡಿ, ಅವಕಾಶಗಳು ಯಾವಾಗಲೂ ಬರುವುದಿಲ್ಲ. ಅವಕಾಶ ಬಂದಾಗ ಕಾರ್ಯ ಸನ್ನದ್ದರಾಗಬೇಕು ಎನ್ನುತ್ತಾ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಅನ್ವೇಷಣೆಯನ್ನು ಮಾಡುತ್ತ ಸಾಗುವುದು ಅತ್ಯಗತ್ಯ ಎಂದರು.
ಶೈಕ್ಷಣಿಕ ಮಾರ್ಗದರ್ಶಕ ಅಭಿಲಾಶ್ ಕ್ಷತ್ರಿಯ ಮಾತನಾಡಿ, ಕಾಲೇಜು ಅತೀ ಕಡಿಮೆ ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ. ಇದಕ್ಕೆ ಕಾರಣ ಅಕ್ಷಯ ಕಾಲೇಜಿನ ಆಡಳಿತ ಮಂಡಳಿಯ ಸಹಕಾರ, ಉಪನ್ಯಾಸಕರ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಛಲ. ಇದು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ವಾಗಿಯೂ ವಿದ್ಯಾರ್ಥಿಗಳ ಸಾಧನೆ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ಐಕ್ಯೂಎಸಿ ನಿರ್ದೇಶಕಿ ರಶ್ಮಿ, ಕಾಲೇಜು ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಕಲಂದರ್ ಶಮಾ ಉಪಸ್ಥಿತರಿದ್ದರು.
ಪ್ರಶಸ್ತಿ:
ಕೃತ್ವ 2026 ಸಮಗ್ರ ಪ್ರಶಸ್ತಿ ಯನ್ನು ಮ್ಯಾಪ್ಸ್ ಕಾಲೇಜು ಮಂಗಳೂರು ಪಡೆದುಕೊಂಡಿತು. ವಿವೇಕಾನಂದ ಬಿ.ಎಡ್ ಕಾಲೇಜು ಪುತ್ತೂರು ಪ್ರಥಮ ರನ್ನರ್ ಆಪ್ ಪ್ರಶಸ್ತಿ, ಸಂತ ಫಿಲೋಮಿನ ಕಾಲೇಜು ಪುತ್ತೂರು ದ್ವಿತೀಯ ರನ್ನರ್ ಆಪ್ ಪ್ರಶಸ್ತಿ ಪಡೆದುಕೊಂಡರು.
ವಿದ್ಯಾರ್ಥಿಗಳಾದ ಸೃಜನ್ ಮತ್ತು ಕಲಂದರ್ ಶಮಾ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಶೃತ ವಿಜೇತರ ಪಟ್ಟಿಯನ್ನು ವಾಚಿಸಿದರು. ಪ್ರಕೃತಿ ತೃಳ ಪ್ರಾರ್ಥಿಸಿ, ಉಪನ್ಯಾಸಕಿ ಸುಪ್ರಭ ಕೆ. ಮತ್ತು ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ರಾಕೇಶ್ ಸ್ವಾಗತಿಸಿ, ಉಪನ್ಯಾಸಕ ಅವಿನಾಶ್ ಮತ್ತು ವಿದ್ಯಾರ್ಥಿನಿ ಜೆನಿಫರ್ ಡಿಸೋಜ ವಂದಿಸಿದರು. ಆಯಿಷತುಲ್ ರಝೀನ ಬಾನು, ಶಹನಾ ಕಾರ್ಯಕ್ರಮ ನಿರೂಪಿಸಿದರು.























