ಪುತ್ತೂರು: ಮಹಿಳೆಯರು ಸಮಾಜದ ಕಣ್ಣು. ಹಾಗೆಂದು ದೌರ್ಜನ್ಯ ಇಂದಿಗೂ ಮುಂದುವರಿಯುತ್ತಲೇ ಇದೆ. ಇದು ಕೇವಲ ದೈಹಿಕ ಹಿಂಸೆಯಲ್ಲ, ಮಾನಸಿಕ, ಆರ್ಥಿಕ ಮತ್ತು ಲೈಂಗಿಕ ಕಿರುಕುಳಗಳನ್ನು ಒಳಗೊಂಡಿದೆ. ಲಿಂಗ ಅಸಮಾನತೆ ಮತ್ತು ಪುರುಷ ಪ್ರಧಾನ ಮನೋಭಾವವೇ ಇದಕ್ಕೆ ಮುಖ್ಯ ಕಾರಣ ಎಂದು ವಕೀಲರಾದ ಕೃಷ್ಣಪ್ರಸಾದ್ ನಡ್ಸಾರ್ ಅಭಿಪ್ರಾಯಿಸಿದರು.
ಪುತ್ತೂರು ಅನಿಕೇತನ ಎಜುಕೇಶನಲ್ ಟ್ರಸ್ಟಿನ ಮಹಿಳಾ ಸಬಲೀಕರಣ ಯೋಜನೆಯ ಕಾನೂನು ಅರಿವು ನೆರವು 2026 ಸರಣಿ ಕಾರ್ಯಕ್ರಮದ ಅಂಗವಾಗಿ ಜೆಸಿಐ ಪುತ್ತೂರು ಘಟಕದ ಸಹಭಾಗಿತ್ವದಲ್ಲಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ಮಹಿಳಾ ದೌರ್ಜನ್ಯ ಮತ್ತು ಕಾನೂನು ಪರಿಹಾರ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನಾಗರಿಕ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರು ಮಹಿಳಾ ದೌರ್ಜನ್ಯ ಕಡಿಮೆ ಆಗದೇ ಇರುವುದು ವಿಪರ್ಯಾಸ. ಮಹಿಳೆಯರ ಮೇಲಿನ ದೌರ್ಜನ್ಯಗಳು ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಪರಾಧ ಎಂದರು.
ಜೇಸಿಐ ಪುತ್ತೂರು ಘಟಕದ ಅಧ್ಯಕ್ಷ ಜಿತೇಶ್ ರೈ ಮಾತನಾಡಿ, ಕಾನೂನಿನ ಸೂಕ್ತ ಮಾಹಿತಿ ಅರಿವು ಇದ್ದಲ್ಲಿ ಮಾತ್ರ ಮಹಿಳೆಯ ಹಕ್ಕುಗಳ ರಕ್ಷಣೆ ಹಾಗೂ ದೌರ್ಜನ್ಯದ ವಿರುದ್ಧ ಹೋರಾಡುವ ಧೈರ್ಯ ಬರುತ್ತದೆ ಎಂದ ಅವರು, ಸಾಮಾಜಿಕ ಸೇವಾ ಸಂಸ್ಥೆಯಾದ ಜೆಸಿಐ ಸಂಸ್ಥೆಯು ವರ್ಷವಿಡಿ ಮಹಿಳಾ ಸಬಲೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಸೇವಾ ಕಾರ್ಯಗಳನ್ನು ನಡೆಸಲಿದೆ ಎಂದು ತಿಳಿಸಿದರು.
ಕಾಲೇಜಿನ ವಾಣಿಜ್ಯ ವಿಭಾಗದ ಪುಷ್ಪರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ತಮ್ಮ ವಿರುದ್ಧದ ದೌರ್ಜನ್ಯದ ಬಗ್ಗೆ ಸ್ವಯಂ ಜಾಗೃತಿ ವಹಿಸುವ ಹಾಗೂ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಗತ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.
ಜೂನಿಯರ್ ಜೆಸಿ ಅಧ್ಯಕ್ಷೆ ದೀಕ್ಷಿತ ಉಪಸ್ಥಿತರಿದ್ದರು.






















