ಶಿಕ್ಷಣ

ಕಿರುಕುಳ: ಹಾರಾಡಿ ಶಾಲಾ ವಿದ್ಯಾರ್ಥಿಯಿಂದ ಶಾಸಕರಿಗೆ ಮನವಿ! ವಿದ್ಯಾರ್ಥಿ ಜೊತೆ ನಿಂತ ಶಿಕ್ಷಕರು, ಪೋಷಕರು!!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹಾರಾಡಿ ಸರಕಾರಿ ಹಿ ಪ್ರಾ ಶಾಲೆಯಲ್ಲಿನ ವಿದ್ಯಾರ್ಥಿಯ ಪೋಷಕನೋರ್ವ ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕಿರುಕುಳ, ಜೀವ ಬೆದರಿಕೆ ಒಡ್ಡುತ್ತಿದ್ದು ಈ ಬಗ್ಗೆ ಶಿಕ್ಷಕ ಹಾಗೂ ಪೋಷಕರು ಶಾಸಕ ಅಶೋಕ್ ರೈ ಬಳಿ ದೂರು ನೀಡಿ ನ್ಯಾಯದ ಬೇಡಿಕೆ ಇಟ್ಟಿದ್ದಾರೆ.

ಶಾಸಕರಿಗೆ ನೀಡಿದ ದೂರಿನಲ್ಲಿ ಇಂತಿದೆ “ನೀಲ್ ನಿಖಿಲ್ ಎಂಬ ವಿದ್ಯಾರ್ಥಿಯಾದ ನಾನು ಸ.ಮಾ.ಉ.ಹಿ.ಪ್ರ. ಶಾಲೆ ಹಾರಾಡಿ, ಪುತ್ತೂರು ಶಾಲೆಯ 7ನೇ ಬಿ ತರಗತಿಯಲ್ಲಿ ಕಲಿಯುತ್ತಿದ್ದೇನೆ. ನನ್ನ ತರಗತಿಯ ಇನ್ನೊಬ್ಬ ವಿದ್ಯಾರ್ಥಿ ಕಾರಣವಿಲ್ಲದೆ ನನ್ನ ಜೊತೆ ಜಗಳ ತೆಗೆಯುತ್ತಿದ್ದಾನೆ. ನಾನು ಅವನ ಜೊತೆ ಯಾವುದೇ ರೀತಿಯ ಜಗಳ ಮಾಡಿರುವುದಿಲ್ಲ. ಆದರೂ ಕೂಡ ಅವನ ತಂದೆ ತರಗತಿ ಬಿಡುವ ಸಮಯದಲ್ಲಿ ಕಾದು ಕುಳಿತು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ “ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ನಿನ್ನನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿರುತ್ತಾನೆ. ಇದರಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿ ಶಾಲೆಯ ಕಡೆಗೆ ಹೋಗಲು ಮನಸ್ಸಿರುವುದಿಲ್ಲ. ನನ್ನ ಪೋಷಕರು ಇವನ ಚಿತ್ರಹಿಂಸೆ ತಾಳಲಾರದೆ ಮನೆಯನ್ನು ಬದಲಾಯಿಸಿರುತ್ತಾರೆ.

ಆಗಸ್ಟ್ 15 2025ರಂದು ಸ್ವಾತಂತ್ರೋತ್ಸವದ ಕಾರ್ಯಕ್ರಮದಂದು ನನ್ನ ತಾಯಿಯ ಬಳಿ ನಾನು ಯಾರಿಗೂ ಹೆದರುವುದಿಲ್ಲ, ನಿಮ್ಮ ಮಗನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರಿಗೂ ಶಾಲೆಯಲ್ಲಿಯೇ ಬೆದರಿಕೆ ಹಾಕಿರುತ್ತಾನೆ. ನನ್ನ ತಂದೆ ತಾಯಿ ಕೂಲಿ ಮಾಡಿ ಮಗನ ವಿದ್ಯೆಗೋಸ್ಕರ ಸರಕಾರಿ ಶಾಲೆಯನ್ನೇ ಆಶ್ರಯಿಸಬೇಕಾಗಿರುವುದು ಅನಿವಾರ್ಯವಾಗಿದೆ. ಆದ್ದರಿಂದ ನನ್ನ ಪೋಷಕರು ಹಾಗೂ ನನಗೂ ಶಾಲೆಗೆ ಬರಲು ತುಂಬಾ ಭಯವಾಗುತ್ತದೆ. ಬೇರೆ ವಿದ್ಯಾರ್ಥಿಗಳೊಡನೆ ಸುಮ್ಮನೆ ಜಗಳ ತೆಗೆದು ನನ್ನನ್ನೇ ಟಾರ್ಗೆಟ್ ಮಾಡಿ ಅವರಲ್ಲಿಯೂ “ಅವನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಅವರಲ್ಲಿಯೂ ಹೇಳಿರುತ್ತಾರೆ. ಹಾಗೆಯೇ ಶಾಲಾ ಮಕ್ಕಳಲ್ಲಿಯೂ ಟೀಚರ್ ಗಳ ಹೆಸರು, ವಿಳಾಸ, ಮೊಬೈಲ್ ನಂಬರಗಳನ್ನು ಕೇಳುವುದು. ಎಲ್ಲರನ್ನು ದುರುಗುಟ್ಟಿಕೊಂಡು ನೋಡುವುದು, ಅಪ್ಪಣೆಯಿಲ್ಲದೆ ನೇರವಾಗಿ ತರಗತಿಗೆ ಬಂದು ಮಕ್ಕಳಲ್ಲಿ ಪ್ರಶ್ನಿಸುವುದು ಹೀಗೆಲ್ಲಾ ಮಾಡುವಾಗ ನನಗೆ ಹೆದರಿಕೆಯಾಗುತ್ತದೆ. ನಾನು ಒಳ್ಳೆಯ ರೀತಿಯಲ್ಲಿ ಕಲಿತು ನನ್ನ ಪೋಷಕರ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿರುವುದರಿಂದ ಇದೇ ರೀತಿ ಮುಂದುವರಿದರೆ ನನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ಇದರಿಂದ ನನ್ನ ಭವಿಷ್ಯವೇ ಹಾಳಾಗಬಹುದು. ನನಗೆ ಮತ್ತು ನನ್ನ ಮನೆಯವರ ಜೀವಕ್ಕೆ ತೊಂದರೆ ಏನಾದರೂ ಆದರೆ ಅದಕ್ಕೆ ನೇರ ಹೊಣೆ ಅವರೇ ಆಗಿರುತ್ತಾರೆ. ಆದ್ದರಿಂದ ಅವರನ್ನು ಕಠಿಣವಾಗಿ ವಿಚಾರಿಸಿ ನನಗೆ ನ್ಯಾಯವನ್ನು, ಸೂಕ್ತ ಭದ್ರತೆಯನ್ನು ಹಾಗೂ ನನ್ನ ಶಿಕ್ಷಣವನ್ನು ಮುಂದುವರಿಸಲು ನನಗೆ ಶಾಲೆಯಲ್ಲಿ ಕಲಿಕೆಗೆ ಉತ್ತಮ ವಾತಾವರಣವನ್ನು ಕಲ್ಪಿಸಿ ಕೊಡಬೇಕಾಗಿ ತಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ಶಾಸಕರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.

ಕ್ರಮಕ್ಕೆ ಶಾಸಕರ ಸೂಚನೆ:

ಘಟನೆಯ ಬಗ್ಗೆ ಶಾಸಕರು ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ಸುನಿಲ್ ರವರಿಗೆ ಕರೆ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಬೆದರಿಕೆ ಹಾಕಿದವರ ಸರಕಾರಿ ಕಚೇರಿಯಲ್ಲಿ ನೌಕರನಾಗಿದ್ದಾನೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಏನು ಕಾನೂನು ಕ್ರಮಕೈಗೊಳ್ಳಲು ಸಾಧ್ಯವೋ ತಕ್ಷಣ ಕೈಗೊಳ್ಳಿ ಎಂದು ಶಾಸಕರು ಸೂಚನೆ ನೀಡಿದ್ದಾರೆ.

ಮಕ್ಕಳು ‌ಶಾಲೆಗೆ ಬರಲು ಭಯ ಪಡುತ್ತಾರೆ: ಸುಲೋಚಿನಿ

ಎಸ್ ಡಿ ಎಂ ಸಿ ಅಧ್ಯಕ್ಷೆ ಸುಲೋಚಿನಿ ಮಾತನಾಡಿ, ಈ ವ್ಯಕ್ತಿ ಪದೇ ಪದೇ ಶಾಲೆಗೆ ಬಂದು ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಪುತ್ತೂರು ಲೋಕೋಪಯೋಗಿ ಇಲಾಖೆಯಲ್ಲಿ‌ನೌಕರನಾಗಿರುವ ಇವರು ನಮಗೆ ಹಿಂಸೆಯನ್ನು ನೀಡುತ್ತಿದ್ದಾರೆ. ದಾರಿಯಲ್ಲಿ ಓಡಾಡುವಾಗಲೂ ಅಡ್ಡ ನಿಂತು ಜೀವ ಬೆದರಿಕೆ ಹಾಕುತ್ತಿದ್ದಾರೆ. ಇವನ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೇವೆ. ಆದರೆ ಇದುವರೆಗೂ ಯಾವುದೇ ಕ್ರಮ ಜರಗಿಸಿಲ್ಲ ಎಂದು ಶಾಸಕರಲ್ಲಿ ಬಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಪೊಲೀಸರು ಕ್ರಮಕೈಗೊಳ್ಳಬೇಕು: ಮುಖ್ಯ ಶಿಕ್ಷಕ ಕೆ ಕೆ ಮಾಸ್ಟರ್

ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿ ಆತನಿಂದ ಶಾಲೆಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕಿದೆ. ವಿನಾ ಕಾರಣ‌ ಮಕ್ಕಳಲ್ಲಿ‌ಭಯ ಹುಟ್ಟಿಸುವ ಕೆಲಸ ಆತ ಮಾಡುತ್ತಿದ್ದು ನ್ಯಾಯಕ್ಕಾಗಿ  ಶಾಸಕ ಅಶೋಕ್ ರೈ ಬಳಿ ಬಂದಿದ್ದೇವೆ ಎಂದು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts