ಮಂಗಳೂರು: ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಿನೆರ್ಜಿಯಾ-2025ರ ಅಂಗವಾಗಿ ನಡೆದ ರೋಮಾಂಚಕಾರಿ ಏರೋಫಿಲಿಯಾ ಏರ್ ಶೋ ನಡೆದಿದೆ.
ಈ ಏರ್‌ಶೋನಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಹೊರಗಿನವರಿಂದ ತಯಾರಿಸಲ್ಪಟ್ಟ ಸುಮಾರು 10 ವಿಮಾನಗಳು ಹಾರಾಟ ನಡೆಸಿತ್ತು. ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳೇ ತಯಾರಿಸಿರುವ 7 ವಿಮಾನಗಳನ್ನು ಇಲ್ಲಿ ಹಾರಿಸಲಾಗಿದೆ. ಫ್ಲೈಟ್ ತಯಾರಿ, ಪೈಲಟ್ ತಯಾರಿ ಸೇರಿದಂತೆ ಒಂದು ತಿಂಗಳಿನಿಂದ ವಿದ್ಯಾರ್ಥಿಗಳು ಈ ಏರ್‌ಶೋಗೆ ತಯಾರಿ ನಡೆಸಿದ್ದಾರೆ.
ಈ ಏರ್‌ಶೋನಲ್ಲಿ ನಾಲ್ಕು ಪೈಲಟ್ ಜೆಟ್ಸ್ ಅಂದರೆ ಎಫ್-22 ರ‌್ಯಾಪಿಡ್ ಅಮೇರಿಕಾ ರೆಪ್ಲಿಕಾ ಮಾದರಿಯ ವಿಮಾನಗಳು, ಮೂರು ಜೂನಿಯರ್ ವಿದ್ಯಾರ್ಥಿಗಳಿಗಾಗಿ ತಯಾರಿಸಿದ ವಿಮಾನಗಳು. ಇನ್ನೊಂದು ಡ್ರೋನ್ ಅನ್ನು ಹಾರಿಸಲಾಗಿದೆ. ಜೊತೆಗೆ ಎಫ್‌ಟಿವಿ ರೇಸಿಂಗ್ ಹಾಗೂ ಯುದ್ಧ ವಿಮಾನವನ್ನು ಹಾರಿಸಲಾಗಿದೆ. ಉಳಿದಂತೆ ಹಾರಾಟ ನಡೆಸಿದ ಮೂರು ವಿಮಾನಗಳು ಹೊರಗಿನಿಂದ ಬಂದವು.
ವಿದ್ಯಾರ್ಥಿಗಳೇ ಪೈಲಟ್’ಗಳಾದ್ರು:
ರಂಜಿತ್, ಸಮೃದ್ಧ್ ಸಾಲಿಮ್, ಪ್ರಥಮ್, ಸನತ್, ಯಶಸ್ ಸೇರಿದಂತೆ ಸಹ್ಯಾದ್ರಿ ಕಾಲೇಜಿನ 8 ಮಂದಿ ವಿದ್ಯಾರ್ಥಿಗಳೇ ಪೈಲಟ್‌ಗಳಾಗಿ ವಿಮಾನ ಹಾರಿಸಿದ್ದಾರೆ. ಸಿನೆರ್ಜಿಯಾ-2025ರ ಅಂಗವಾಗಿ ವಿವಿಧ ಶಾಲೆಗಳ ಹೈಸ್ಕೂಲ್ ಮಕ್ಕಳಿಂದ ಪ್ರಾಜೆಕ್ಟ್‌ಗಳ ಪ್ರದರ್ಶನ ಆಯೋಜಿಸಲಾಗಿದೆ. ಈ ಮಕ್ಕಳಲ್ಲೂ ವಿಜ್ಞಾನ- ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸಹ್ಯಾದ್ರಿ ಕಾಲೇಜು ಏರ್‌ಶೋವನ್ನು ಆಯೋಜಿಸಲಾಗಿದೆ. ಒಟ್ಟಿನಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳ ಈ ಏರ್‌ಶೋ ಸಾಹಸವನ್ನು ನೆರೆದಿದ್ದವರು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.


























