ಮಂಗಳೂರು–ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ಭಾಗದಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿರುವ ಹಿನ್ನೆಲೆಯಲ್ಲಿ ಸುಮಾರು 400 ಮೀಟರ್ ಉದ್ದದ ಕಾಮಗಾರಿ ಸ್ಥಗಿತಗೊಂಡಿದೆ.
ಇದರ ಪರಿಣಾಮವಾಗಿ ವಾಹನ ಸಂಚಾರ ಸವಾಲಾಗಿ ಪರಿಣಮಿಸಿದೆ. ಶಿರಾಡಿ ಘಾಟ್ ಮೂಲಕ ಸಾಗುವ ಈ ರಾಷ್ಟ್ರೀಯ ಹೆದ್ದಾರಿ ಕರಾವಳಿ ಮತ್ತು ರಾಜಧಾನಿ ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಹಾಸನ ಭಾಗದಲ್ಲಿ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಸಂಚಾರ ಸುಗಮವಾಗುವ ನಿರೀಕ್ಷೆಯಿತ್ತು. ಆದರೆ ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗೆ ನಡೆಯುತ್ತಿರುವ ಭಾಗದಲ್ಲಿ ಆನೆ ದಾಟು (Elephant Corridor) ಸ್ಥಳ ಆಯ್ಕೆ ವಿಚಾರದಲ್ಲಿ ಉಂಟಾದ ವಿವಾದದಿಂದ ಕಾಮಗಾರಿಗೆ ತಡೆ ಬಿದ್ದಿದೆ.
ಎಲ್ಲಿ ಸ್ಥಗಿತವಾಗಿದೆ ಕಾಮಗಾರಿ?
ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಪ್ರದೇಶದಲ್ಲಿ ಆನೆ ದಾಟು ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಸುಮಾರು 400 ಮೀಟರ್ ರಸ್ತೆ ಕಾಮಗಾರಿ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಈ ಭಾಗದಲ್ಲಿ ಈಗ ರಸ್ತೆ ಹದಗೆಟ್ಟಿದ್ದು, ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ.
ಅರ್ಜಿದಾರರ ಆಕ್ಷೇಪ ಏನು?
ಲಾವತ್ತಡ್ಕ ಕಳೆಂಜಾಲು ವಸತಿ ಪ್ರದೇಶವಾಗಿದ್ದು, ಇಲ್ಲಿ ಆನೆ ದಾಟು ನಿರ್ಮಿಸಿದರೆ ಕಾಡಾನೆಗಳು ನೇರವಾಗಿ ಮನೆಗಳತ್ತ ಪ್ರವೇಶಿಸುವ ಅಪಾಯವಿದೆ ಹಾಗೂ ಕೃಷಿ ಜಮೀನುಗಳಿಗೆ ಹಾನಿಯಾಗುವ ಭೀತಿ ಇದೆ ಎಂದು ಸ್ಥಳೀಯರು ವಾದಿಸಿದ್ದಾರೆ.400ಕ್ಕೂ ಹೆಚ್ಚು ಮನೆಗಳು, ದೇವಾಲಯ ಮತ್ತು ಶಾಲೆಗಳು ಸುತ್ತಮುತ್ತ ಇವೆ.ಆನೆಗಳು ಸಹಜವಾಗಿ ಸಂಚರಿಸುವ ಪ್ರದೇಶದಲ್ಲೇ ದಾಟು ನಿರ್ಮಿಸಬೇಕು ಎಂಬುದು ನಿವಾಸಿಗಳ ಆಗ್ರಹ.
ಮೂಲ ಯೋಜನೆ ಬದಲಾಯಿತೇ?
ಮೂಲ ಯೋಜನಾ ವರದಿಯ ಪ್ರಕಾರ, ಲಾವತ್ತಡ್ಕ ಪೇಟೆಯಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಎರಡೂ ಬದಿ ರಕ್ಷಿತ ಅರಣ್ಯ ಪ್ರದೇಶವನ್ನು ಆನೆ ದಾಟಿಗೆ ಗುರುತಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಬಂಡೆಕಲ್ಲು ಇರುವ ಕಾರಣದಿಂದ ಸ್ಥಳ ಬದಲಾವಣೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪರ್ಯಾಯ ಸ್ಥಳದ ಪರಿಶೀಲನೆ
ಅರಣ್ಯ ಇಲಾಖೆ ಮತ್ತು ಎನ್‌ಎಚ್‌ಎಐ ಅಧಿಕಾರಿಗಳು ಪರ್ಯಾಯ ಸ್ಥಳಗಳ ಪರಿಶೀಲನೆ ನಡೆಸಿದ್ದು, ಪೆರಿಯಾಶಾಂತಿ–ಹೊಸಮಜಲು ನಡುವಿನ ಮಣ್ಣಗುಂಡಿ ಭಾಗ ಸೂಕ್ತ ಎಂದು ಪ್ರಾಥಮಿಕವಾಗಿ ಕಂಡುಬಂದಿದೆ. ಈಗಾಗಲೇ ಅಲ್ಲಿ ಚತುಷ್ಪಥ ರಸ್ತೆ ನಿರ್ಮಾಣಗೊಂಡಿರುವುದರಿಂದ, ಮೇಲ್ಸೇತುವೆ ಮಾದರಿಯಲ್ಲಿ ಅರಣ್ಯದ ಎರಡೂ ಬದಿಗಳನ್ನು ಸಂಪರ್ಕಿಸಿ ಆನೆ ದಾಟು ನಿರ್ಮಿಸುವ ಸಾಧ್ಯತೆಗಳ ಕುರಿತು ಚರ್ಚೆ ನಡೆಯುತ್ತಿದೆ.
ಸಂಚಾರಕ್ಕೆ ತೊಂದರೆ
ಕೋರ್ಟ್ ತಡೆಯಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಭಾರೀ ವಾಹನ ಸಂಚಾರದಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಇದರಿಂದ ಪ್ರಯಾಣಿಕರು ಮತ್ತು ಸರಕು ಸಾಗಣೆ ವಾಹನಗಳು ವಿಳಂಬ ಅನುಭವಿಸುತ್ತಿವೆ.
ಮುಂದಿನ ಕ್ರಮ ಏನು?
ಹೈಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ಬಳಿಕ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಅರಣ್ಯ ಸಂರಕ್ಷಣೆ ಹಾಗೂ ಜನವಸತಿ ಸುರಕ್ಷತೆ ಎರಡನ್ನೂ ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.
ಶಿರಾಡಿ ಘಾಟ್ ನಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಅಭಿವೃದ್ಧಿ ಮತ್ತು ಪರಿಸರ ಸಮತೋಲನ ಎರಡನ್ನೂ ಕಾಯ್ದುಕೊಳ್ಳುವುದು ಸವಾಲಿನ ಕೆಲಸವಾಗಿದ್ದು, ಸರ್ಕಾರದ ಮುಂದಿನ ನಡೆ ಕುತೂಹಲ ಕೆರಳಿಸಿದೆ.























