ಕರಾವಳಿ

ಕಟ್ ಕನ್ವರ್ಷನ್ ಸಮಸ್ಯೆಗೆ ಮುಕ್ತಿ – ಅಕ್ರಮ ಬಡಾವಣೆಗಳ ಷರತ್ತುಬದ್ಧ ಸಕ್ರಮಕ್ಕೆ ರಾಜ್ಯ ಸರ್ಕಾರ ಕ್ರಮ: ಅಶೋಕ್ ಕುಮಾರ್ ರೈ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಟ್ ಕನ್ವರ್ಷನ್ ಸಮಸ್ಯೆಗೆ ರಾಜ್ಯ ಸರ್ಕಾರ ಪರಿಹಾರ ನೀಡಿದ್ದು, ಅಕ್ರಮ ಬಡಾವಣೆಗಳನ್ನು ಷರತ್ತುಬದ್ಧವಾಗಿ ಸಕ್ರಮಗೊಳಿಸಲು ಸಾಧ್ಯವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿಗೆ ಇದರಿಂದ ಪ್ರಯೋಜನವಾಗಲಿದೆ. 2024ರ ಸೆಪ್ಟಂಬರ್ 10ರ ಮೊದಲು ರಚಿಸಲಾದ ಅಕ್ರಮ ಬಡಾವಣೆಗಳನ್ನು ರಾಜ್ಯ ಸರ್ಕಾರ ಸಕ್ರಮಗೊಳಿಸಲು ಮುಂದಾಗಿದೆ. ಇದರಿಂದ ಈ ಹಿಂದೆ ಕೃಷಿ ಕೃತಾವಳಿಯ ಜಮೀನಿನನ್ನು ತಮ್ಮ ಮಕ್ಕಳಿಗೆ ಪಾಲು ಮಾಡಿ ಹಂಚಿರುವ ಸಾಕಷ್ಟು ಮಂದಿಗೆ ಮನೆ ನಿರ್ಮಾಣ ಮಾಡಲು ಇದ್ದ ತೊಡಕು ನಿವಾರಣೆಯಾದಂತಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆಯ ಬಹು ವರ್ಷಗಳ ಬೇಡಿಕೆಯಾಗಿತ್ತು. ಕಟ್ ಕನ್ವರ್ಷನ್ ಸಮಸ್ಯೆಯಿಂದ ಇರುವ ಜಾಗವನ್ನೂ ಅನುಭವಿಸಲಾಗದೆ ತುಂಬಾ ಮಂದಿ ಪರದಾಡುವಂತಾಗಿತ್ತು. ಇಂತಹ ಜಾಗದಲ್ಲಿ ಅನಧಿಕೃತವಾದ ಬಡಾವಣೆಗಳನ್ನು ನಿರ್ಮಿಸಿದವರಿಗೂ ಸಾಕಷ್ಟು ತೊಂದರೆಗಳುಂಟಾಗಿತ್ತು. ಸರ್ಕಾರ ಷರತ್ತುಬದ್ಧವಾಗಿ ಸಕ್ರಮಕ್ಕೆ ಅವಕಾಶ ಕಲ್ಪಿಸಿರುವುದು ಎಲ್ಲಾ ಸಮಸ್ಯೆಗಳನ್ನೂ ಪರಿಹಾರ ಮಾಡಿದಂತಾಗಿದೆ ಎಂದು ತಿಳಿಸಿದರು.

ಇಂತಹ ಅಕ್ರಮ ಬಡಾವಣೆಗಳು ರಸ್ತೆಯನ್ನು ಹೊಂದಿರಬೇಕು ಎಂಬುವುದು ಕಡ್ಡಾಯ ನಿಯಮವಾಗಿದೆ. ಕೃಷಿಕರು ತಮ್ಮ ಜಮೀನನ್ನು ಮಕ್ಕಳಿಗೆ ಪಾಲು ಮಾಡಿಕೊಟ್ಟಿದ್ದರೂ ಈ ಪ್ರತಿಯೊಂದು ಜಾಗಕ್ಕೂ ರಸ್ತೆ ಅಗತ್ಯ. ಒಂದು ವೇಳೆ ರಸ್ತೆಗೆ ಜಾಗದ ಕೊರತೆ ಇದ್ದರೆ ಪಾಲು ಮಾಡಿಕೊಟ್ಟಿರುವ ಜಾಗದಲ್ಲಿಯೇ ರಸ್ತೆ ನಿರ್ಮಿಸಲು ದಾನಪತ್ರದ ಮೂಲಕ ನಗರಸಭೆಗೆ ರಸ್ತೆಗೆ ಬೇಕಾದ ಸ್ಥಳವನ್ನು ನೀಡಬೇಕು. ಹಾಗಾದ ಪಕ್ಷದಲ್ಲಿ ಮಾತ್ರ ಈ ಸಕ್ರಮೀಕರಿಸುವ ಹಾಗೂ ನಗರಸಭೆಯಿಂದ ಖಾತೆಯನ್ನು ಹೊಂದುವ ಅವಕಾಶ ನೀಡಲಾಗಿದೆ. ಆದರೆ 2024ರ ನಂತರದ ಅಕ್ರಮ ಬಡಾವಣೆಗಳಿಗೆ ಈ ಸಕ್ರಮ ವ್ಯವಸ್ಥೆ ಇಲ್ಲ. ಇನ್ನು ಮುಂದೆ ಮಾಡುವ ಯಾವುದೇ ಅನಧಿಕೃತ ಬಡಾವಣೆಗಳಿಗೂ ಸಕ್ರಮದ ಅವಕಾಶವನ್ನು ಪ್ರಸ್ತುತ ನಿರಾಕರಣೆ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ಆದೇಶವಾಗಿದೆ ಎಂದು ಅವರು ತಿಳಿಸಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಸತ್ತಿಕಲ್ಲು ಸೇತುವೆಗೆ ರೂ. 2.24 ಕೋಟಿ, ಪುತ್ತೂರಿನ ಕುಟಿಯೋಪಿನಡ್ಕ ಮುಳಿಯಡ್ಕ ಸೇತುವೆಗೆ ರೂ. 2 ಕೋಟಿ ಹಾಗೂ ಕೆಯ್ಯೂರು ಕಣಿಯೂರು ಸೇತುವೆಗೆ ರೂ. 1.65 ಕೋಟಿ ಅನುದಾನ ಮಂಜೂರಾಗಿದೆ. 3 ಸೇತುವೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಒಟ್ಟು ರೂ. 6.05 ಕೋಟಿ ಮಂಜೂರು ಮಾಡಿದೆ ಎಂದರು.

ಧಾರ್ಮಿಕ ತಾಣಗಳಿಗೆ ಪಹಣಿ- ಪ್ರಾಯೋಗಿಕ ಚಿಂತನೆ

ಪುತ್ತೂರು ತಾಲೂಕಿನ ಧಾರ್ಮಿಕ ತಾಣಗಳು ಬಹುತೇಕ ಸರ್ಕಾರಿ ಜಾಗದಲ್ಲಿದ್ದು, ಇದಕ್ಕೆ ಯಾವುದೇ ಅನುದಾನ ನೀಡಲು ಅವಕಾಶ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ತಾಲೂಕಿನ 9 ಧಾರ್ಮಿಕ ತಾಣಗಳಿಗೆ ಜಾಗ ಮಂಜೂರು ಮಾಡಿ ದೇವರ ಹೆಸರಲ್ಲಿಯೇ ಪಹಣಿಪತ್ರಗಳನ್ನು ತಯಾರಿಸುವ ಕಾರ್ಯ ನಡೆಯುತ್ತಿದೆ. ತಾಲೂಕಿನ ದೈವಗಳ ಗುಡಿ, ಭಜನಾ ಮಂದಿರ, ದೇವಸ್ಥಾನ, ಚರ್ಚು, ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕ ತಾಣಗಳು ಸರ್ಕಾರಿ ಜಾಗದಲ್ಲಿದ್ದರೆ ಅಂತಹ ಧಾರ್ಮಿಕ ತಾಣಗಳಿಗೆ ಸ್ವಂತ ನೆಲೆ ಕಲ್ಪಿಸುವ ಚಿಂತನೆ ಇದರ ಹಿಂದೆ ಅಡಗಿದೆ. ಪ್ರಸ್ತುತ ಪ್ರಾಯೋಗಿಕ ನೆಲೆಯಲ್ಲಿ ಈ ಕಾರ್ಯ ನಡೆಯುತ್ತಿದೆ. ಮುಂದೆ ಎಲ್ಲಾ ಧಾರ್ಮಿಕ ತಾಣಗಳಿಗೂ ಇದು ಅನ್ವಯವಾಗಲಿದೆ. ಈ ಪ್ರಾಯೋಗಿಕ ಚಿಂತನೆಗೆ ತಂತ್ರಾಂಶದಲ್ಲಿ ಅಳವಡಿಕೆ ಯಶಸ್ವಿಯಾದರೆ ರಾಜ್ಯಕ್ಕೇ ಮಾದರಿಯಾಗಲಿದೆ ಎಂದು ಅವರು ಹೇಳಿದರು.

ರೈತವರ್ಗದ ಬೆಳೆ ವಿಮೆ ವಿಚಾರವಾಗಿ ಬೆಂಗಳೂರಿನಲ್ಲಿ ಸ್ವೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಮಂಗಳವಾರ ಮಧ್ಯಾಹ್ನ ಸಭೆ ನಡೆಯಲಿದೆ. ಇದರಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು, ವಿಮಾ ಕಂಪೆನಿ ಅಧಿಕಾರಿಗಳ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯರಾದ ನಿಹಾಲ್ ಶೆಟ್ಟಿ, ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಗ್ಯಾರಂಟಿಯೋಜನೆಯ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ದೇಹದಂತೆ ದೇಶ, ದೇವರ ರಕ್ಷಣೆ ಅಗತ್ಯ | ಪುತ್ತೂರಿನಲ್ಲಿ ಶೋಭಾಯಾತ್ರೆ ಬಳಿಕ ನಡೆದ ಹಿಂದೂ ಸಂಗಮದಲ್ಲಿ ಕಣಿಯೂರು ಶ್ರೀ

ಪುತ್ತೂರು: ದೇಹವನ್ನು ದಿನನಿತ್ಯ ರಕ್ಷಣೆ ಮಾಡುವಂತೆ ದೇಶ ಹಾಗೂ ದೇವಸ್ಥಾನವನ್ನು ರಕ್ಷಣೆ…