ಪುತ್ತೂರು: ಸಾವಯವ ಮಳಿಗೆ ಮರಿಕೆ ಸಂಸ್ಥೆಯ 3ನೇ ಮಳಿಗೆ ಮರಿಕೆ ಪ್ಯಾರಡೈಸ್ ಸೋಮವಾರ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಮುಂಭಾಗದ ತ್ರೀನೇತ್ರ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.
ಮಳಿಗೆಯನ್ನು ಉದ್ಘಾಟಿಸಿದ ಮಾಲಕರ ತಂದೆ ಎ.ಪಿ ಸದಾಶಿವ ಮಾತನಾಡಿ, ಸುಹಾಸ್’ಗೆ ಎಳವೆಯಿಂದಲೇ ವ್ಯಾಪಾರದ ಮೇಲೆ ಆಸಕ್ತಿ. ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದು, ಗ್ರಾಹಕರ ಆಶೀರ್ವಾದ ಸಿಕ್ಕಿದೆ. ಇದೇ ರೀತಿ ಮುಂದೆಯೂ ಸಹಕಾರ ನೀಡಲಿ ಎಂದು ಹಾರೈಸಿದರು.
ಭರಣಿಯಿಂದ ಡ್ರೈಫ್ರುಟ್ಸ್ ಹೊರತೆಗೆಯುವ ಮೂಲಕ ಸಂಸ್ಥೆಗೆ ಚಾಲನೆ ನೀಡಿದ ಮಂಗಳೂರು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಅಧ್ಯಕ್ಷ ರಾಘವೇಂದ್ರ ಹೊಳ್ಳ ಮಾತನಾಡಿ, ಕೃಷಿ ಮತ್ತು ವ್ಯವಹಾರ ಒಟ್ಟಿಗೆ ಸಾಗುವುದು ಉತ್ತಮ. ಇದರಿಂದ ಊರಿನ ಹಾಗೂ ದೇಶದ ಅಭಿವೃದ್ಧಿ ಸಾಧ್ಯ. ಉತ್ಕೃಷ್ಟ ಗುಣಮಟ್ಟದ ಒಣಹಣ್ಣುಗಳ ಎಕ್ಸ್’ಕ್ಲೂಸಿವ್ ಮಳಿಗೆಯಾಗಿದ್ದು ಪುತ್ತೂರಿನ ಜನತೆಗೆ ಗುಣಮಟ್ಟದ ಒಣಹಣ್ಣುಗಳು ದೊರೆಯಲಿದೆ ಎಂದರು.
ಕಟ್ಟಡದ ಪಾಲುದಾರ ಗಿರಿಧರ ಹೆಗ್ಡೆ ಮಾತನಾಡಿ, ಕಟ್ಟಡದ ಉದ್ಘಾಟನೆ ಆದ ದಿನವೇ ಮರಿಕೆಯವರ ಮಳಿಗೆ ಇದೇ ಕಟ್ಟಡದಲ್ಲಿ ಶುಭಾರಂಭಗೊಂಡಿದೆ. ಒಂದೇ ವರ್ಷದಲ್ಲಿ ಒಂದೇ ಕಟ್ಟಡದಲ್ಲಿ ಮೂರನೇ ಮಳಿಗೆ ಪ್ರಾರಂಭಗೊಂಡಿದೆ. ನೈಸರ್ಗಿಕ ಮತ್ತ ಸಾವಯವ ಉತ್ಪನ್ನಗಳು ನಮ್ಮ ಕಟ್ಟಡದಲ್ಲಿದ್ದು ಮರಿಕೆ ಸಾವಯವ ಮಳಿಗೆಯು ಪುತ್ತೂರಿನ ಜನತೆಗೆ ಆರೋಗ್ಯದಾಯಕ ಸಂಸ್ಥೆಯಾಗಿದೆ ಎಂದರು.
ಸಂಸ್ಥೆಯ ಮಾಲಕ ಸುಹಾಸ್ ಮರಿಕೆ ಅತಿಥಿಗಳನ್ನು ಸ್ವಾಗತಿಸುತ್ತಾ, ಈಗಾಗಲೇ ಇರುವ ಸಾವಯವ ಉದ್ಯಮಕ್ಕೆ ಹೊಂದಿಕೆಯಾಗಿ ಅಡುಕಲೆ ಆಹಾರ ಉತ್ಪನ್ನ ಮತ್ತು ಕಲ್ಬಾವಿ ಕಂಪನಿಯ ಡ್ರೈ ಹಾಗೂ ನಟ್ಸ್ ಎಂಬ ಎರಡು ಕಂಪನಿಗಳ ಒಣಹಣ್ಣುಗಳ ಎಕ್ಸ್’ಕ್ಲೂಸಿವ್ ಮಳಿಗೆಯ ಮೂಲಕ ಪುತ್ತೂರಿನ ಜನತೆಗೆ ಗುಣಮಟ್ಟದ ಒಣಹಣ್ಣುಗಳನ್ನು ನೀಡಲಾಗುತ್ತಿದೆ ಎಂದರು.
ವರಲಕ್ಷ್ಮೀ ಪ್ರಾರ್ಥಿಸಿದರು. ಗ್ರಾಮಜನ್ಯ ಸಂಸ್ಥೆಯ ನಿರ್ದೇಶಕ ನಿರಂಜನ ಪೋಳ್ಯ ಕಾರ್ಯಕ್ರಮ ನಿರೂಪಿಸಿ, ಮಾನಸ ಸುಹಾಸ್ ವಂದಿಸಿದರು.






















