ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಬಗ್ಗೆ ಅಸಭ್ಯ ಸಂದೇಶವನ್ನು ಹಾಕಿದ ಪ್ರಕರಣಕ್ಕೆ ಸಂಬಂದಿಸಿದಂತೆ ಸುಳ್ಯ ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಕಾರ್ತಿಕ್ ಎಂಬವರು ಶಾಸಕರ ಬಳಿ ಬಂದು ಕ್ಷಮೆ ಕೇಳಿದ್ದು, ಶಾಸಕರು ತಿಳಿ ಹೇಳಿದ್ದಾರೆ.
ಇನ್ನು ಮುಂದೆ ಯಾರ ಬಗ್ಗೆಯೂ ಅಸಭ್ಯ ಸಂದೇಶ ಕಳುಹಿಸಬೇಡ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಅಶೋಕ್ ರೈ ಶಾಸಕರಾಗಿ ಆಯ್ಕೆಯಾದ ಕೆಲವು ತಿಂಗಳ ಬಳಿಕ ಕಾರ್ತಿಕ್ ಫೇಸ್ ಬುಕ್ ನಲ್ಲಿ ಶಾಸಕರ ಬಗ್ಗೆ ಅಸಭ್ಯವಾದ ಪದಗಳನ್ನು ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಇದರ ವಿರುದ್ದ ಅಶೋಕ್ ರೈ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಆರಂಭವಾಗುತ್ತಿದ್ದಂತೆಯೇ ಸರಕಾರಿ ನೌಕರ ಕಾರ್ತಿಕ್ ಅವರು ಶಾಸಕರಲ್ಲಿ ಬಂದು ನಾನು ತಪ್ಪು ಮಾಡಿದೆ, ನನ್ನನ್ನು ಕ್ಷಮಿಸಿ ಸರ್ ಎಂದು ಅಂಗಲಾಚಿಕೊಂಡರು. ನೀವು ಕ್ಷಮಿಸದೆ ಇದ್ದಲ್ಲಿ ನನಗೆ ತೊಂದರೆಯಾಗಲಿದ್ದು, ನನ್ನ ನೌಕರಿಗೂ ಕುತ್ತು ಬರಲಿದೆ ಎಂದು ಕೇಳಿಕೊಂಡರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ನೀವು ನನ್ನ ಬಗ್ಗೆ ಕೆಟ್ಟ ಕಮೆಂಟ್ ಹಾಕಿದ್ದೀರಿ. ನಾನು ನಿಮಗಾಗಲಿ, ನಿಮ್ಮ ಕುಟುಂಬದವರಿಗಾಗಲಿ ಏನೂ ತೊಂದರೆ ಕೊಟ್ಟಿಲ್ಲ. ಮತ್ತೆ ಯಾಕೆ ನನ್ನ ಮೇಲೆ ಕೋಪ ಎಂದು ಕೇಳಿದರು. ನೀವು ಮಾಡಿದ ಈ ಕೃತ್ಯಕ್ಕೆ ನೀವು ಪಶ್ಚಾತ್ತಾಪಪಟ್ಟು ನನ್ನ ಬಳಿ ಬಂದಿದ್ದೀರಿ. ಇದಕ್ಕಾಗಿ ನಿಮ್ಮನ್ನು ಕ್ಷಮಿಸಿದ್ದೇನೆ. ಮುಂದಕ್ಕೆ ಯಾರ ಬಗ್ಗೆಯೂ ಕೆಟ್ಟ ಕಾಮೆಂಟ್ ಹಾಕಬೇಡಿ. ಈ ರೀತಿಯ ಕಾಮೆಂಟ್ ಹಾಕುವುದು ಸಭ್ಯರ ಲಕ್ಷಣವಲ್ಲ ಎಂದು ಬುದ್ದಿವಾದ ಹೇಳಿ ಕಳುಹಿಸಿದರು.


























