ಪಾರಂಪಾರಿಕ ಆಯುರ್ವೇದ ವೈದ್ಯರಾದ ಕೆ. ಶೀನಪ್ಪ ಶೆಟ್ಟಿ (96) ಅವರು ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಉಪ್ಪಿನಂಗಡಿಯ ವಿಜಯ ವೈದ್ಯ ಶಾಲೆಯ ಮಾಲಕರಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಸೇವೆ ಸಲ್ಲಿಸಿದ್ದರು.
1929ರ ಜುಲೈ 26ರಂದು ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕುಲ್ಲಂಜದಲ್ಲಿ ಜನಿಸಿದ ಶೀನಪ್ಪ ಶೆಟ್ಟಿ, ತಮ್ಮ ಭಾವನಾದ ಪಂಡಿತ್ ವೆಂಕಪ್ಪ ರೈಯವರ ಮಾರ್ಗದರ್ಶನದಲ್ಲಿ ಗಿಡಮೂಲಿಕೆ ಔಷಧ ತಯಾರಿಕೆಯಲ್ಲಿ ನೈಪುಣ್ಯತೆ ಪಡೆದರು. ಬ್ರಿಟಿಷರ ಕಾಲದ ವೈದ್ಯ ವಿಶಾರದಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಉಪ್ಪಿನಂಗಡಿಯಲ್ಲಿ ವಿಜಯ ವೈದ್ಯ ಶಾಲೆ ಸ್ಥಾಪಿಸಿ, ಆಯುರ್ವೇದ ಔಷಧಗಳ ಮೂಲಕ ಜನಪ್ರಿಯರಾದರು. ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ ಕಾಡುಗಳಿಂದ ಗಿಡಮೂಲಿಕೆಗಳನ್ನು ಸಂಗ್ರಹಿಸಿ ವಿವಿಧ ಔಷಧಗಳನ್ನು ತಯಾರಿಸಿದ್ದರು.
1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಗಾಂಧೀಜಿಯ ಕರೆಗೆ ಸ್ಪಂದಿಸಿ, ಬ್ರಿಟಿಷರ ವಿರುದ್ಧ ಗೋಡೆ ಬರಹ ಬರೆಯುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿದ್ದರು.
ಯಕ್ಷಗಾನ ತಾಳಮದ್ದಲೆಯಲ್ಲಿ ಆಸಕ್ತಿಯಿದ್ದ ಶೆಟ್ಟಿಯವರು, ಭೀಮ, ದುಶ್ಯಾಸನ ಮುಂತಾದ ಕಠಿಣ ಪಾತ್ರಗಳಿಗೆ ಜೀವ ತುಂಬಿದ್ದರು. ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದ ಇವರು, ನಾಟಕ ರಂಗದಲ್ಲೂ ಗುರುತಿಸಿಕೊಂಡಿದ್ದರು. ಉಪ್ಪಿನಂಗಡಿಯ ಸರಕಾರಿ ಪ್ರೌಢಶಾಲೆಯ ನಿರ್ಮಾಣಕ್ಕಾಗಿ ನಾಟಕ ಪ್ರದರ್ಶನಗಳ ಮೂಲಕ ಸಾವಿರಾರು ರೂಪಾಯಿ ಸಂಗ್ರಹಿಸಿದ್ದರು. ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಇವರು ತಮ್ಮ ಪುತ್ರ ಡಾ. ಯತೀಶ್ ಕುಮಾರ್ ಶೆಟ್ಟಿ, ಪ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ. ಜಗದೀಶ್ ಶೆಟ್ಟಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಶೆಟ್ಟಿಯವರ ಪಾರ್ಥಿವ ಶರೀರವನ್ನು ಇಳಂತಿಲ ಗ್ರಾಮ ಕುಂಟಾಲಕಟ್ಟೆಯ ತುಂಗಾ ನಿವಾಸಕ್ಕೆ ತಂದು, ಅಂತಿಮ ದರ್ಶನದ ಬಳಿಕ ಅಂತಿಮ ವಿಧಿಗಳನ್ನು ನೆರವೇರಿಸಲಾಗುವುದು ಎಂದು ಕೆ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.






















