ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಪೆರಿಯ ಕಲ್ಯೂಟ್ ನಿವಾಸಿಗಳಾದ ಕೃಪೇಶ್ (19) ಮತ್ತು ಶರತ್ ಲಾಲ್(21) ಕೊಲೆ ಪ್ರಕರಣದ ಹತ್ತು ಮಂದಿ ಆರೋಪಿಗಳಿಗೆ ಅವಳಿ ಜೀವಾವಧಿ ಸಜೆ ಹಾಗೂ ಉದುಮ ಮಾಜಿ ಶಾಸಕ ಸಹಿತ ನಾಲ್ವರಿಗೆ ತಲಾ ಐದು ವರ್ಷ ಶಿಕ್ಷೆ ವಿಧಿಸಿ ಎರ್ನಾಕುಲಂ ಸಿಬಿಐ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಶಿಕ್ಷೆಗೊಳದವರಲ್ಲಿ ಉದುಮ ಮಾಜಿ ಶಾಸಕ ಕೆ.ವಿ.ಕುಂಞರಾಮನ್, ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಸೇರಿದ್ದಾರೆ.
ಸಿಪಿಎಂ ಸ್ಥಳೀಯ ಸಮಿತಿಯ ಮಾಜಿ ಸದಸ್ಯ ಪೆರಿಯದ ಎ.ಪೀತಾಂಬರನ್ (51), ಸಜಿ ಸಿ. ಜಾರ್ಜ್ (46), ಕೆ.ಎಂ.ಸುರೇಶ್(33), ಕೆ.ಅನಿಲ್ ಕುಮಾರ್ (41), ಗಿಜಿನ್(32), ಆರ್.ಪ್ರಶಾಂತ್(28), ಎ.ಅಶ್ವಿನ್(24), ಸುಭೀಷ್ (24), ಟಿ.ರಂಜಿತ್ (52) ಮತ್ತು ಎ.ಸುರೇಂದ್ರನ್( 53) ಎಂಬವರಿಗೆ ಅವಳಿ ಜೀವಾವಧಿ ಸಜೆ ಹಾಗೂ ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.
ಮಾಜಿ ಶಾಸಕ ಕೆ.ವಿ.ಕುಂಞರಾಮನ್, ಕೆ.ಮಣಿಕಂಠನ್, ರಾಘವನ್ ವೆಳುತ್ತೊಳಿ, ಕೆ.ವಿ.ಭಾಸ್ಕರನ್ ಎಂಬವರಿಗೆ ತಲಾ ಐದು ವರ್ಷಗಳ ಸಜೆ ವಿಧಿಸಲಾಗಿದೆ.
2019ರ ಫೆಬ್ರವರಿ 17ರ ರಾತ್ರಿ ಕೃಪೇಶ್ ಮತ್ತು ಶರತ್ ಲಾಲ್ ರನ್ನು ತಂಡವು ಹತ್ಯೆ ಮಾಡಿತ್ತು. ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸ್, ಕ್ರೈಮ್ ಬ್ರಾಂಚ್ ಹಾಗೂ ಸಿಬಿಐ ತನಿಖೆ ನಡೆಸಿತ್ತು.
ಪ್ರಕರಣದಲ್ಲಿ ಒಟ್ಟು 24 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಹತ್ತು ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಪೆರಿಯ ಪರಿಸರದಲ್ಲಿ ಘರ್ಷಣೆ ನಡೆದಿತ್ತು. ಈ ದ್ವೇಷ ಇಬ್ಬರ ಕೊಲೆಯಲ್ಲಿ ಕೊನೆಗೊಂಡಿತ್ತು.
ಇಂದು ಪ್ರಕರಣದ ತೀರ್ಪು ಹೊರಬೀಳುವ ಹಿನ್ನಲೆಯಲ್ಲಿ ಪೆರಿಯ ಪರಿಸರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೆರಿಯ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿತ್ತು.