ಸಿದ್ದರಾಮಯ್ಯ ಅವರನ್ನು ಅಹಿಂದ ನಾಯಕ ಎಂದು ಕರೆಯುತ್ತಾರೆ. ದಲಿತರ ಉದ್ಧಾರಕ್ಕಾಗಿ ಸರ್ಕಾರದ ಮುಖೇನ ಹಲವು ಕಾರ್ಯಕ್ರಮಗಳನ್ನು ಸಹ ಜಾರಿಗೆ ತಂದಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ದಲಿತ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ವರದಿಯಾಗಿದೆ. ವರುಣಾ ಕ್ಷೇತ್ರದ ಸಿಎಂ ಅವರ ಹುಟ್ಟೂರು ಸಿದ್ದರಾಮಯ್ಯಹುಂಡಿ ಪಕ್ಕದಲ್ಲೇ ಇರುವ ಶ್ರೀನಿವಾಸಪುರ ಗ್ರಾಮದಲ್ಲಿ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದೆ.
ಗ್ರಾಮದ ಹಿರಿಯರು ಎನ್ನಲಾದ ಚಿಕ್ಕಂಡಯ್ಯ, ಬಸವಯ್ಯ, ಮೋಟ ಮಹದೇವಯ್ಯ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಹದೇವ್ ಎಂಬುವವರು ದಲಿತ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಸಿಎಂ ತವರು ಕ್ಷೇತ್ರದಲ್ಲೇ ಇಂತಹ ಕಟ್ಟುಪಾಡುಗಳು ಇನ್ನೂ ಜೀವಂತವಾಗಿದೆಯೇ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.
ಏನಿದು ಘಟನೆ?: ಶ್ರೀನಿವಾಸಪುರ ದಲಿತ ಕುಟುಂಬದ ವ್ಯಕ್ತಿ ಹಾಗೂ ರಂಗನಾಥಪುರದ ಮತ್ತೊಬ್ಬನ ನಡುವೆ ಕೆಲವು ವರ್ಷಗಳ ಹಿಂದೆ ಗಲಾಟೆ ನಡೆದಿತ್ತು. ಈ ಸಂಬಂಧ ಊರಿನಲ್ಲಿ ನ್ಯಾಯ ಪಂಚಾಯಿತಿ ಕೂಡ ನಡೆದಿತ್ತು. ರಂಗನಾಥಪುರದ ಪ್ರಮೋದ್ ಕಡೆಯವರು ಶ್ರೀನಿವಾಸಪುರದ ಸುರೇಶ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಅಲ್ಲದೆ ಮನೆಯಲ್ಲಿದ್ದ ವಸ್ತುಗಳನ್ನು ಕೂಡ ಹಾಳು ಮಾಡಿದ್ದರು ಎನ್ನಲಾಗಿದೆ.
ಬಳಿಕ ಇಬ್ಬರ ಗಲಾಟೆ ವಿಚಾರವಾಗಿ ನ್ಯಾಯ ಪಂಚಾಯಿತಿ ಇಟ್ಟಿದ್ದ ಊರಿನ ಹಿರಿಯರು, ಪ್ರಮೋದ್‌ಗೆ 25,000 ರೂಪಾಯಿ ದಂಡ ಹಾಗೂ ಸುರೇಶ್‌ಗೆ 15,000 ರೂಪಾಯಿ ದಂಡ ಹಾಕಿದ್ದರು. ಆದರೆ ಸುರೇಶ್ ಈ ಪಂಚಾಯಿತಿ ನಿರ್ಧಾರವನ್ನು ಒಪ್ಪಿರಲಿಲ್ಲ, ಅನ್ಯಾಯವಾಗಿರುವುದು ನಮಗೆ, ನಾವು ದಂಡ ಕಟ್ಟೋದಿಲ್ಲ ಎಂದು ತಿರುಗೇಟು ಕೊಟ್ಟಿದ್ದರು.
ಇದರಿಂದ ಊರಿನ ಹಿರಿಯರು ಎಂಬುವವರು ಕೋಪಗೊಂಡಿದ್ದರು. ಪಂಚಾಯಿತಿಯಲ್ಲಿ ನಮಗೇ ಅವಮಾನ ಮಾಡಿದ್ದೀಯ ಎಂದು ಸುರೇಶ್ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಅಲ್ಲದೆ ದಂಡ ಕಟ್ಟುವವರೆಗೂ ಬಹಿಷ್ಕಾರವೂ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ ಸುರೇಶ್ ಕುಟುಂಬದ ಜೊತೆ ಯಾರಾದರೂ ಸಂಪರ್ಕ ಹೊಂದಿದರೆ ಅವರಿಗೂ ತಲಾ 5,000 ರೂಪಾಯಿ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರಂತೆ.
ಸದ್ಯ ಸುರೇಶ್ ಹಾಗೂ ಅವರ ಕುಟುಂಬವನ್ನು ಗ್ರಾಮಸ್ಥರು ಊರಿನಿಂದ ಬಹಿಷ್ಕಾರ ಹಾಕಿ, ಹೊರಗೆ ಕಳಿಸಿದ್ದಾರೆ. ಊರಿನಲ್ಲಿ ಯಾವುದೇ ಶುಭಕಾರ್ಯಗಳು, ಸಾವು ಸೇರಿದಂತೆ ಯಾವುದೇ ಆಚರಣೆಯಲ್ಲಿ ಸುರೇಶ್ ಅವರ ಕುಟುಂಬ ಭಾಗಿಯಾಗಬಾರದು. ಅವರು ಊರಿನಿಂದ ಹೊರಗೇ ಇರಬೇಕು ಎಂದು ಬಹಿಷ್ಕಾರ ಹಾಕಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬಳಿಕ ಬಹಿಷ್ಕಾರಕ್ಕೆ ಒಳಗಾದವರು ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಇವರಿಗೆ ನ್ಯಾಯವೂ ಕೊಡಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಹಿಂದೆ ಸಿನಿಮಾಗಳಲ್ಲಿ ಮಾತ್ರವೇ ಈ ಸಾಮಾಜಿಕ ಬಹಿಷ್ಕಾರದ ಪದ ಕೇಳಿದ್ದರು. ಅಲ್ಲಿ ಮಾತ್ರವೇ ಸಾಮಾಜಿಕ ಬಹಿಷ್ಕಾರ ಹಾಕುವುದನ್ನು ನೋಡಿದ್ದರು. ಜಗತ್ತು ಎಷ್ಟೇ ಮುಂದುವರಿದಿದ್ದರೂ ಇನ್ನೂ ಇಂತಹ ಅನಿಷ್ಟ ಪದ್ಧತಿಗಳು ರೂಢಿಯಲ್ಲಿವೆ ಎಂದು ಈ ಘಟನೆಯನ್ನು ಹಲವರು ಖಂಡಿಸಿದ್ದಾರೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರ ತವರಿನಲ್ಲೇ ಇಂತಹ ಅನಿಷ್ಟಕ್ಕೆ ಕಡಿವಾಣ ಹಾಕಿಲ್ಲವಲ್ಲ? ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.