tamanvi
ಅಪರಾಧ

ಉದ್ಯೋಗದ ಆಮಿಷದಲ್ಲಿ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ. ವಂಚನೆ? ಮಂಗಳೂರಿನಲ್ಲಿ ವಿದ್ಯಾರ್ಥಿ ಸಂಘಟನೆಗಳ ಗಂಭೀರ ಆರೋಪ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗದ ಭರವಸೆ ನೀಡಿ ಬಿಸ್ನೆಸ್ ನೆಪದಲ್ಲಿ ಹಣ ಪಡೆದು ವಂಚಿಸಲಾಗುತ್ತಿರುವ ಪ್ರಕರಣ ಮಂಗಳೂರು ನಗರದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ.ಆಮಿಷಕ್ಕೆ ಒಳಗಾದ ಸಂತ್ರಸ್ತೆಯರ ಸಮ್ಮುಖದಲ್ಲಿ ವಿದ್ಯಾರ್ಥಿ ಸಂಘಟನೆಗಳಾದ ಎಬಿವಿಪಿ ಹಾಗೂ ಎನ್‌ಎಸ್‌ಯುಐ ಪ್ರತಿನಿಧಿಗಳು ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪಗಳ ವಿವರ ನೀಡಿದ್ದಾರೆ. ಕುದ್ರೋಳಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಳಲಿ ಸಾತ್ವಿಕ್ ಮಾತನಾಡಿ, ಉದ್ಯೋಗ ನೀಡುವ ನೆಪದಲ್ಲಿ ವಿದ್ಯಾರ್ಥಿಗಳನ್ನು ಚೇನ್ ಬಿಸ್ನೆಸ್‌ಗೆ ಸೇರಿಸಿಕೊಂಡು ಬಳಿಕ ಆರ್ಥಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಪಡಿಸಲಾಗುತ್ತಿದೆ ಎಂದು ಆರೋಪಿಸಿದರು. ನಗರದಲ್ಲಿನ ವಿವಿಧ ಕಾಲೇಜುಗಳ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಟ್‌ವರ್ಕ್ ಮಾರ್ಕೆಟಿಂಗ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯ ಮೋಸದ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.

ಕೆಲವರು ಮನೆಯವರಿಂದ ಹಣ ಪಡೆದು, ಇನ್ನೂ ಕೆಲವರು ಚಿನ್ನ ಒತ್ತೆಯಿಟ್ಟು ಹಣ ಹೂಡಿಕೆ ಮಾಡಿರುವುದೂ ತಿಳಿದು ಬಂದಿದೆ. ಬಳಿಕ ಮೋಸ ಅರಿತ ಕೆಲವರು ಸಂಸ್ಥೆಯಿಂದ ಹೊರ ಬಂದಿದ್ದರೂ, ಇನ್ನೂ ಹಲವರು ಅದರ ಜಾಲದಲ್ಲಿ ಸಿಲುಕಿರುವ ಬಗ್ಗೆ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.ಎನ್‌ಎಸ್‌ಯುಐ ಮಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಕ್ರಿಸ್ಟನ್ ಮಿನೇಜಸ್ ಮಾತನಾಡಿ, ಮಹಾರಾಷ್ಟ್ರದ ನಾಸಿಕ್ ಮೂಲದ ಈ ಸಂಸ್ಥೆ ವ್ಯಾಪಾರ ಪರವಾನಗಿ ಪಡೆದುಕೊಂಡಿದ್ದರೂ, ಆರು ತಿಂಗಳ ಹಿಂದೆಯೂ ಇದೇ ರೀತಿಯ ದೂರುಗಳು ದಾಖಲಾಗಿದ್ದವು. ಇದೀಗ ಮತ್ತೆ ವಿದ್ಯಾರ್ಥಿಗಳನ್ನು ಆಕರ್ಷಿಸಿ ಮಾನಸಿಕ ಹಿಂಸೆ ನೀಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೂ ತರಲಾಗುವುದು ಎಂದರು.

ಸಂತ್ರಸ್ತೆಯೊಬ್ಬಳು ಮಾತನಾಡಿ, ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಸ್ನೇಹಿತೆಯ ಮೂಲಕ ಉದ್ಯೋಗಾವಕಾಶದ ಭರವಸೆಯಲ್ಲಿ ಸಂಸ್ಥೆಗೆ ಸೇರಿದ್ದು, ಆರಂಭದಲ್ಲಿ ತರಬೇತಿ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗಿದೆ. ಬಳಿಕ ಹೆಚ್ಚಿನ ಮೊತ್ತ ಪಾವತಿಸಿ ವಸ್ತುಗಳನ್ನು ಖರೀದಿಸುವಂತೆ ಹಾಗೂ ಇನ್ನೂ ಮೂವರನ್ನು ಸೇರಿಸಿದರೆ ಹಣ ಮರುಪಾವತಿಸುವುದಾಗಿ ಭರವಸೆ ನೀಡಲಾಗಿದೆ ಎಂದು ಆರೋಪಿಸಿದರು. ಅನುಮಾನ ವ್ಯಕ್ತಪಡಿಸಿದ ಬಳಿಕ ಹಣ ಹಿಂತಿರುಗಿಸಲು ವಿಳಂಬ ಮಾಡಲಾಗಿದ್ದು, ಬಳಿಕ ಪೊಲೀಸರ ಮಧ್ಯಸ್ಥಿಕೆಯಿಂದ ಹಣ ಮರಳಿ ಪಡೆದಿರುವುದಾಗಿ ತಿಳಿಸಿದ್ದಾರೆ.

ಇನ್ನೋರ್ವ ಸಂತ್ರಸ್ತೆ ಮಾತನಾಡಿ, ಸಾಫ್ಟ್‌ವೇರ್ ಡೆವಲಪರ್ ಉದ್ಯೋಗದ ಭರವಸೆಯಲ್ಲಿ ಸಂಸ್ಥೆಗೆ ಸೇರಿದ್ದು, ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಹಣ ಹೂಡಿಕೆ ಮಾಡಲು ಒತ್ತಾಯಿಸಲಾಗುತ್ತಿತ್ತು ಎಂದು ಆರೋಪಿಸಿದರು.ಪ್ರಸ್ತುತ ಸುಮಾರು 40 ಮಂದಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

1 of 118