ಪುತ್ತೂರು: ಕನ್ನಡದಲ್ಲಿ ವೀರ ಕಂಬಳ ಹಾಗೂ ತುಳುವಿನಲ್ಲಿ ಬಿರ್ದ್’ದ ಕಂಬುಲ ಎಂಬ ಹೆಸರಿನಲ್ಲಿ ಕಂಬಳ ಕುರಿತ ಸಿನಿಮಾ ಪುತ್ತೂರು ಜಿಎಲ್ ವನ್ ಮಾಲ್’ನ ಭಾರತ್ ಸಿನಿಮಾಸ್’ನಲ್ಲಿ ಶುಕ್ರವಾರ ತೆರೆ ಕಂಡಿತು.
ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ರೈತರ ಕ್ರೀಡೆ ಉಳಿಬೇಕು, ಬೆಳಿಬೇಕು. ಇದಕ್ಕೆ ಚಿತ್ರರಂಗವೂ ಜೊತೆಗೂಡಿದೆ. ಹಾಗಾಗಿ ಬಿರ್ದ್’ದ ಕಂಬುಲಕ್ಕೆ ನಮ್ಮೆಲ್ಲರ ಸಹಕಾರ ಅಗತ್ಯ. ಬಿರ್ದ್’ದ ಕಂಬುಲ ಸಿನಿಮಾ ಗೆಲ್ಲಬೇಕು ಎಂದರು.
ಪುತ್ತೂರು ಕೋಟಿ – ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿ, ಮುತ್ತಪ್ಪ ರೈ ಇರುವಾಗಲೇ ನಂಬರ್ ವನ್ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಅವರು ಸಿನಿಮಾ ಮಾಡುವ ಬಗ್ಗೆ ಮಾತನಾಡುತ್ತಿದ್ದರು. ಮುತ್ತಪ್ಪ ರೈ ಅವರು ಸಿನಿಮಾ ಮಾಡುವಂತೆ ಪ್ರೋತ್ಸಾಹ ನೀಡಿದ್ದರು. ಇದೀಗ ಸಿನಿಮಾ ತೆರೆ ಕಾಣುತ್ತಿದೆ. ಕಂಬಳಕ್ಕೆ ದೇಶ ವಿದೇಶಗಳಲ್ಲಿ ಪ್ರೋತ್ಸಾಹವೂ ಸಿಗುತ್ತಿದೆ. ಕಂಬಳ ಕುರಿತಾಗಿ ತೆರೆ ಕಂಡಿರುವ ಬಿರ್ದ್’ದ ಕಂಬುಲ ಸಿನಿಮಾವನ್ನು ಗೆಲ್ಲಿಸಬೇಕು ಎಂದರು.
ನಟ ಚೇತನ್ ರೈ ಮಾಣಿ ಮಾತನಾಡಿ, ಜನ ಸಾಮಾನ್ಯರ ಕ್ರೀಡೆಯನ್ನು ವಿಶ್ವದಾದ್ಯಂತ ತೋರಿಸುವ ನಿಟ್ಟಿನಲ್ಲಿ ರಾಜೇಂದ್ರಸಿಂಗ್ ಬಾಬು ಅವರು ಸಿನಿಮಾ ಮಾಡಿದ್ದಾರೆ. ಕನ್ನಡದ ಮೇರು ನಟರಾದ ಪ್ರಕಾಶ್ ರೈ, ಆದಿತ್ಯ, ರವಿಶಂಕರ್ ಮೊದಲಾದವರು ಅಭಿನಯಿಸಿದ್ದು, ಉತ್ತಮವಾಗಿ ಮೂಡಿಬಂದಿದೆ. ಇಂತಹ ಉತ್ತಮ ಸಿನಿಮಾಕ್ಕೆ ಸಾರ್ವಜನಿಕರ ಬೆಂಬಲ ಅಗತ್ಯ ಎಂದರು.
ನಿರಂಜನ್ ರೈ ಮಠಂತಬೆಟ್ಟು ಮಾತನಾಡಿ, ವೀರ ಕಂಬಳ ಅಥವಾ ಬಿರ್ದ್’ದ ಕಂಬುಲದಲ್ಲಿ ನಮ್ಮೂರಿನ ವೀರ ಕಲಾವಿದರು ಇದ್ದಾರೆ. ಸಿನಿಮಾಕ್ಕೆ ಶುಭವಾಗಲಿ ಎಂದರು.
ಉದ್ಯಮಿ ಶಿವರಾಂ ಆಳ್ವ, ರಂಗಕರ್ಮಿ ಸುಂದರ್ ರೈ ಮಂದಾರ, ರಶ್ಮಿ ಚೇತನ್ ರೈ, ಸಿನಿಮಾ ನಟಿ ವೆನ್ಯಾ ರೈ, ಧನು ಕುಲಾಲ್ ಬೊಳಂತೂರು, ಸುರೇಶ್ ರೈ ಸೂಡಿಮುಳ್ಳು, ಮನೋಜ್ ಸುವರ್ಣ ಸೊರಕೆ, ಭಾರತ ಸಿನಿಮಾಸ್ ಪುತ್ತೂರು ಮೆನೇಜರ್ ಜಯರಾಂ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.
ಕುಕ್ಕಾಡಿ ಬಾಲಕೃಷ್ಣ ರೈ ವಂದಿಸಿದರು. ಪದ್ಮರಾಜ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
ಕಂಬಳದ ಕುರಿತಾಗಿ ಮೂಡಿಬಂದ ಅತ್ಯುತ್ತಮ ಸಿನಿಮಾ:
ಉದ್ಘಾಟನಾ ಸಮಾರಂಭದ ಬಳಿಕ ಅಭಿಪ್ರಾಯ ವ್ಯಕ್ತಪಡಿಸಿದ ಪ್ರೇಕ್ಷಕರು – ಮೇರು ನಟರಾದ ಪ್ರಕಾಶ್ ರೈ, ರವಿಶಂಕರ್ ಅವರು ಕಂಬಳದ ಪರ – ವಿರೋಧ ವಾಧಿಸುವ ವಕೀಲರಾಗಿ ಗಮನ ಸೆಳೆಯುತ್ತಾರೆ. ಸ್ಯಾಂಡಲ್ ವುಡ್ ಹೀರೋ ಆದಿತ್ಯ ಅವರು ಮುತ್ತಪ್ಪ ರೈ ಅವರ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಅಂಡರ್ ವರ್ಲ್ಡ್ ಹಾಗೂ ತುಳುನಾಡಿನ ಸೊಗಡಿಗೆ ಜೀವ ತುಂಬಿದ್ದಾರೆ. ಸ್ವರಾಜ್ ಶೆಟ್ಟಿ ಹಾಗೂ ಶ್ರೀನಿವಾಸ ಗೌಡ ಕಂಬಳ ಓಡಿಸುವ ಓಟಗಾರರಾಗಿ ಹಾಗೂ ಲವ್ ಬರ್ಡ್ಸ್’ಗಳಾಗಿ ಗಮನ ಸೆಳೆಯುತ್ತಾರೆ. ಇದರ ನಡುವೆ ಇಡೀಯ ಸಿನಿಮಾಕ್ಕೆ ಕಳೆ ನೀಡಿರುವುದು ಎರಡು ಗುತ್ತು ಮನೆಗಳ ನಡುವಿನ ಪ್ರತಿಷ್ಠೆಯ ಕಣವಾಗಿ ಕಂಬಳ. ಕಂಬಳದ ಕಣದಲ್ಲಿ ರಕ್ತ ಹರಿದಲ್ಲಿಂದ ಹಿಡಿದು, ಕ್ಲೈಮ್ಯಾಕ್ಸ್’ಗೆ ಅಂತಿಮವಾಗುವ ಹಗೆ ಸಿನಿಮಾದ ತೂಕವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಕಂಬಳ ಪ್ರತಿಷ್ಠೆಯ ಕ್ರೀಡೆಯಷ್ಟೇ ಅಲ್ಲ, ಸಂಸ್ಕೃತಿಯ ಭಾಗ ಎನ್ನುವುದನ್ನು ಮನೆ ಮುಂದೆ ಬಂದು ನಿಲ್ಲುವ ನಾಗರಹಾವಿನ ಮೂಲಕ ತೋರಿಸಲಾಗಿದೆ. ಇದರ ನಡುವೆ ಕಂಬಳ ನಿಲ್ಲಸಬೇಕೆಂಬ ಷಡ್ಯಂತ್ರ, ರಾಜಕೀಯ, ಪೇಟಾದ ನಡೆ ಎಲ್ಲವೂ ಇಲ್ಲಿದೆ. ಹೀಗಾಗಿ ಬಿರ್ದ್’ದ ಕಂಬುಲ ತುಳು ಹಾಗೂ ಕನ್ನಡ ಸಿನಿಮಾ ಪ್ರತಿಯೊಬ್ಬರು ನೋಡಲೇಬೇಕು.






















