ಪುತ್ತೂರು: ಸಸ್ಪೆನ್ಸ್ ತುಳು ಸಿನಿಮಾ ಪಿಲಿಪಂಜ ಡಿ. 12ರಂದು ಪುತ್ತೂರು ಜಿಎಲ್ ವನ್ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಂಡಿದೆ.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ದೀಪ ಬೆಳಗಿಸಿ, ಸಿನಿಮಾದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಅವರಿಗೆ ದೇವರ ಪ್ರಸಾದ ನೀಡಿ ಚಿತ್ರ ಉತ್ತಮವಾಗಿ ಮೂಡಿ ಬರಲಿ. ರಾಜ್ಯಮಟ್ಟದಲ್ಲಿ ಸಿನಿಮಾ ತಂಡ ಮಿನುಗುವಂತೆ ಆಗಲಿ ಎಂದು ಹಾರೈಸಿದರು.
ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಮಾತನಾಡಿ, ಸಿನಿಮಾ ನಿರ್ಮಾಪಕ, ನಿರ್ದೇಶಕ ನಟರು ಎಲ್ಲರೂ ಪುತ್ತೂರಿವರೇ ಎಂದಾಗ ಹೆಮ್ಮೆ ಆಗುತ್ತದೆ. ಈ ಸಿನಿಮಾ ಹೆಚ್ಚು ದಿನ ಓಡಲಿ ಎಂದರು.
ತುಳು ನಾಟಕದ ಪೋಷಕರು ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಭರತ್ ಶೆಟ್ಟಿ ಪುತ್ತೂರಿನ ಯುವಕ. ಅವರ ನೇತೃತ್ವದಲ್ಲಿ ಮೂಡಿ ಬಂದ ಚಿತ್ರ ಉತ್ತಮವಾಗಿ ಬೆಳೆಯಲಿ. ಪುತ್ತೂರಿನ ಜನತೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.
ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರು ಮಾತನಾಡಿ ಈ ಚಿತ್ರ ನಾಡಿಗೆ ಬೆಳಕು ನೀಡಲಿ ಎಂದರು.
ಶಿವರಾಮ ಆಳ್ವ ಮಾತನಾಡಿ, ನಮ್ಮ ತುಳು ಸಿನಿಮಾಕ್ಕೆ ನಮ್ಮೂರಿನಲ್ಲಿ ಮಾತ್ರವಲ್ಲ ಹೊರ ಊರಿನಲ್ಲಿಯೂ ಅಭಿಮಾನಿಗಳಿದ್ದಾರೆ. ಅವರಿಗೆ ಸಿನಿಮಾದ ಬಗ್ಗೆ ತಿಳಿಸಬೇಕು. ತುಳು ಸಿನಿಮಾ ಅಂದರೆ ಎಲ್ಲರನ್ನು ಜೊತೆ ಸೇರಿಸಿಕೊಂಡು ಮಾಡುವ ಸಿನಿಮಾ. ಇದು ಯಶಸ್ಸಾದರೆ ಸ್ಯಾಂಡಲ್ ವುಡ್, ಬಾಲಿವುಡ್ ನಿಂದಲೂ ಕರೆ ಬರುತ್ತದೆ ಎಂದರು.
ಸುಂದರ್ ರೈ ಮಂದಾರ ಮಾತನಾಡಿ, ಮೊದಲ ವಾರದಲ್ಲೇ ಸಿನಿಮಾವನ್ನು ನೋಡಿ. ಇದು ಸಿನಿಮಾಕ್ಕೆ ಭಾರೀ ಪ್ಲಸ್. ನಮ್ಮೂರಿನವರೇ ನಿರ್ಮಿಸಿರುವ ಪಿಲಿಪಂಜ ಸಿನಿಮಾವನ್ನು ಗೆಲ್ಲಿಸಿಕೊಡಿ ಎಂದರು.
ಆರ್ಯಾಪು ಗ್ರಾಪಂ ಪಿಡಿಓ ನಾಗೇಶ್ ಮಾತನಾಡಿ, ಪಿಲಿಪಂಜ ವಿಭಿನ್ನ ಪ್ರಯೋಗ. ಇದರ ಮೂಲಕ ಒಂದಷ್ಟು ಕಲಾವಿದರು, ತಂತ್ರಜ್ಞರು ಬೆಳಕಿಗೆ ಬರಲಿ. ಈ ಸಿನಿಮಾ ಯಶಸ್ಸಾಗಲಿ ಎಂದು ಹಾರೈಸಿದರು.
ಎಂ.ಪಿ. ಅಬೂಬಕ್ಕರ್ ಮಾತನಾಡಿ, ನನಗೆ ತುಳು ಸಿನಿಮಾ ಅಂದರೆ ಭಾರೀ ಅಭಿಮಾನ. ವಿದ್ಯಾರ್ಥಿ ದೆಸೆಯಲ್ಲಿ ಎರಡು ನಾಟಕ ಬರೆದೆ. ಇಂಚಾಂಡ ಎಂಚ ಹಾಗೂ ಮದಿಮೆದ ಮರ್ಲ್ ಎಂದು. ಅದರಲ್ಲಿ ಅಭಿನಯಿಸಿದೆವು ಕೂಡ. ಹಾಗಾಗಿ ತುಳು ಹಾಗೂ ತುಳು ಸಿನಿಮಾದ ಮೇಲೆ ಅಭಿಮಾನವಿಟ್ಟು ಬಂದಿದ್ದೇನೆ. ಸಿನಿಮಾ ಯಶಸ್ಸಾಗಲಿ ಎಂದು ಹಾರೈಸಿದರು.
ಪ್ರಗತಿಪರ ಕೃಷಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್ ರೈ ನರಿಮೊಗರು, ರವಿ ರಾಮಕುಂಜ, ಗೀತಾ ಶುಭಹಾರೈಸಿದರು.
ಭಾರತ್ ಸಿನಿಮಾಸ್‌ನ ಮ್ಯಾನೇಜರ್ ಜಯರಾಮ್ ವಿಟ್ಲ, ನಟ ನಿರ್ಮಾಪಕ ದಯಾನಂದ ರೈ ಬೆಟ್ಟಂಪಾಡಿ, ನಿರ್ದೇಶಕ ರಜಾಕ್ ಪುತ್ತೂರು, ಹೇಮಾ ಜಯರಾಂ ಉಪಸ್ಥಿತರಿದ್ದರು.
ಪದ್ಮರಾಜ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
























