ಬ್ಲಾಕ್ ಬಸ್ಟರ್ ಸಿನಿಮಾಗಳು ರಶ್ಮಿಕಾ ಮಂದಣ್ಣ ಅವರ ಖಾತೆಯಲ್ಲಿ ಇವೆ. ಅಷ್ಟಕ್ಕೂ ಎಲ್ಲ ನಿರ್ಮಾಪಕರು ರಶ್ಮಿಕಾ ಮಂದಣ್ಣ ಅವರನ್ನೇ ಆಯ್ಕೆ ಮಾಡಲು ಕಾರಣ ಏನು? ನಿರ್ಮಾಪಕರ ನೆಚ್ಚಿನ ನಟಿಯಾಗಲು ಹಿಂದಿರುವ ಕಾರಣವನ್ನು ಟಾಲಿವುಡ್ ನಿರ್ಮಾಪಕರು ಬಿಚ್ಚಿಟ್ಟಿದ್ದಾರೆ.
ಟಾಲಿವುಡ್ ನಿರ್ಮಾಪಕ ಎಸ್ಕೆಎನ್ ಅವರು ದಿ ಗರ್ಲ್ಫ್ರೆಂಡ್’ ಸಿನಿಮಾದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತಾಡಿದರು.
ನಟಿ ದೀಪಿಕಾ ಪಡುಕೋಣೆ ಅವರು ಕೆಲಸದ ಅವಧಿಯ ಬಗ್ಗೆ ತಕರಾರು ತೆಗೆದಿರುವುದು ದೊಡ್ಡ ಸುದ್ದಿ ಆಗಿದೆ. ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ದೀಪಿಕಾ ಪಡುಕೋಣೆ ಅವರು ತಾಕೀತು ಮಾಡಿದ್ದಾರೆ. ಅವರ ಬೇಡಿಕೆಗೆ ಕೆಲವು ನಿರ್ಮಾಪಕರು ಒಪ್ಪಿಕೊಂಡಿಲ್ಲ. ಹಾಗಾಗಿ ‘ಕಲ್ಕಿ 2898 ಎಡಿ’ ಸೀಕ್ವೆಲ್ ಹಾಗೂ ‘ಸ್ಪಿರಿಟ್’ ಸಿನಿಮಾಗಳಿಂದ ದೀಪಿಕಾ ಅವರನ್ನು ತೆಗೆದುಹಾಕಲಾಗಿದೆ. ಈ ವಿಷಯದ ಹಿನ್ನೆಲೆಯಲ್ಲಿ ನಿರ್ಮಾಪಕ ಎಸ್ಕೆಎನ್ ಅವರು ಮಾತನಾಡಿದರು.
‘ಎಷ್ಟು ಗಂಟೆ ಕೆಲಸ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎಷ್ಟೇ ಗಂಟೆ ಆದರೂ ಕೆಲಸ ಮಾಡಲು ಸಿದ್ಧವಾಗಿರುವ ಏಕೈಕ ಪ್ಯಾನ್ ಇಂಡಿಯಾ ಹೀರೋಯಿನ್ ಎಂದರೆ ಅದು ರಶ್ಮಿಕಾ ಮಂದಣ್ಣ. ಅವರು ಪ್ರೀತಿಯಿಂದ ಕೆಲಸ ಮಾಡುತ್ತಾರೆ, ಗಂಟೆಗಳ ಲೆಕ್ಕದಲ್ಲಿ ಅಲ್ಲ’ ಎಂದು ನಿರ್ಮಾಪಕ ಎಸ್ಕೆಎನ್ ಅವರು ಹೊಗಳಿದ್ದಾರೆ.
‘ಸಮಯದ ಬಗ್ಗೆ ರಶ್ಮಿಕಾ ಮಂದಣ್ಣ ಅವರಿಗೆ ಬದ್ಧತೆ ಇದೆ. ಕಠಿಣವಾದ ಇತಿಮಿತಿಗಳು ಇಲ್ಲ. ಹಾಗಾಗಿ ಎಲ್ಲರೂ ಕೂಡ ರಶ್ಮಿಕಾ ಮಂದಣ್ಣ ಅವರನ್ನು ತಮ್ಮ ಕುಟುಂಬದವರ ರೀತಿ ಕಾಣುತ್ತಾರೆ’ ಎಂಬುದು ನಿರ್ಮಾಪಕ ಎಸ್ಕೆಎನ್ ಅವರ ಅಭಿಪ್ರಾಯ. ಒಟ್ಟಾರೆ, ಕಲಾವಿದರ ಕೆಲಸದ ಅವಧಿಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ದೀಪಿಕಾ ಪಡುಕೋಣೆ ಅವರ ಬೇಡಿಕೆ ಕೂಡ ಸರಿ ಎಂದು ಕೆಲವರು ಹೇಳುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ನಟ ದೀಕ್ಷಿತ್ ಶೆಟ್ಟಿ ಜೊತೆ ಅವರು ನಟಿಸಿರುವ ತೆಲುಗು ಸಿನಿಮಾ ‘ದಿ ಗರ್ಲ್ಫ್ರೆಂಡ್’ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆ ಆಗಿ ಗಮನ ಸೆಳೆದಿದೆ.

























