‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿದ್ದು, ಮತ್ತೆ ದೈವದ ಅನುಕರಣೆ ಮಾಡುತ್ತಿರುವ ಘಟನೆಗಳು ವರದಿ ಆಗುತ್ತಿವೆ. ಇದನ್ನು ತುಳುಕೂಟ ವಿರೋಧಿಸಿದ್ದು, ರಿಷಬ್ ಶೆಟ್ಟಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದೆ.
‘ರಿಷಬ್ ಶೆಟ್ಟಿ ಅವರೇ ನೀವು ದೈವಗಳಲ್ಲಿ ಅಪಾರ ನಂಬಿಕೆ ಇರುವವರು ಎಂದು ಹಲವು ಬಾರಿ ಹೇಳಿಕೊಂಡಿದ್ದೀರಿ. ನೀವು ದೈವದ ಬಗ್ಗೆ ಸಿನಿಮಾ ಮಾಡಿದ್ದೀರಿ ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ನಿಮ್ಮ ಸಿನಿಮಾ ನೋಡುವ ಅಭಿಮಾನಿಗಳಿಗೆ ದೈವದ ಬಗ್ಗೆ ಜಾಗೃತಿ ಮೂಡಿಸಿ. ‘ಕಾಂತಾರ’ ಬಂದಾಗಿನಿಂದಲೂ ದೈವದ ಅನುಕರಣೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬ ದೈವದ ವೇಷ ಧರಿಸಿ ಚಿತ್ರಮಂದಿರಕ್ಕೆ ಬಂದ ವಿಡಿಯೋ ವೈರಲ್ ಆಗಿತ್ತು. ಸಿನಿಮಾ ನೋಡುವಾಗಲೇ ಕೆಲ ಪ್ರೇಕ್ಷಕರು ದೈವ ಬಂದವರಂತೆ ವರ್ತಿಸಿದ್ದಾರೆ. ಇನ್ನು ಕೆಲವರು ಚಿತ್ರಮಂದಿರದಿಂದ ಹೊರಬಂದಾಗ ಕೂಗಾಡಿದ ವಿಡಿಯೋಗಳು ವೈರಲ್ ಆಗಿವೆ’
‘ದಿನಬೆಳಗಾದರೆ ಇಂಥಹಾ ವಿಡಿಯೋಗಳನ್ನು ನೋಡಿ ನಾವು ರೋಸಿ ಹೋಗಿದ್ದೇವೆ. ಇವೆಲ್ಲವನ್ನೂ ನೋಡಿ ನೀವೇಕೆ ಮೌನವಾಗಿದ್ದೀರಿ ಎಂಬುದು ತಿಳಿಯುತ್ತಿಲ್ಲ. ಸಿನಿಮಾ ಪ್ರದರ್ಶನಕ್ಕೆ ಮುಂಚೆ ಈ ಬಗ್ಗೆ ಒಂದು ಡಿಸ್ಕ್ಲೇಮರ್ (ಎಚ್ಚರಿಕೆ) ಹಾಕಿ ಎಂದು ಈ ಹಿಂದೆಯೇ ಮನವಿ ಮಾಡಿದ್ದೆವು. ಆದರೆ ಈ ಬಗ್ಗೆ ನಿಮಗೆ ಯಾಕೆ ಅಷ್ಟೋಂದು ನಿರ್ಲಕ್ಷ್ಯವೋ ತಿಳಿಯುತ್ತಿಲ್ಲ. ದೈವಾರಾದನೆ ನಮ್ಮ ನಂಬಿಕೆ. ಕೂಡಲೇ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಜಾಗೃತಿ ಮೂಡಿಸಿ ಜೊತೆಗೆ ಸಿನಿಮಾ ಪ್ರದರ್ಶನಕ್ಕೆ ಮುಂಚೆ ಡಿಸ್ಕ್ಲೇಮರ್ ಹಾಕಿ’ ಎಂದು ತುಳುಕೂಟ ಆಗ್ರಹಿಸಿದೆ.
ಇತ್ತೀಚೆಗಷ್ಟೆ ತಮಿಳುನಾಡಿನ ದಿಂಡಿಗಲ್ನ ಚಿತ್ರಮಂದಿರವೊಂದರಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರದರ್ಶನಕ್ಕೆ ಮುಂಚೆ ವ್ಯಕ್ತಿಯೊಬ್ಬ ದೇವದ ವೇಷ ಧರಿಸಿ ಚಿತ್ರಮಂದಿರ ಪ್ರವೇಶಿಸಿದ್ದ. ಈ ಘಟನೆಯ ವಿಡಿಯೋ ವೈರಲ್ ಆಗಿತ್ತು. ಅದಕ್ಕೂ ಮುನ್ನ ವ್ಯಕ್ತಿಯೊಬ್ಬ ‘ಕಾಂತಾರ’ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರದ ಮುಂದೆ ಚಿತ್ರ-ವಿಚಿತ್ರ ಹಾವಭಾವ ಮಾಡುತ್ತಾ, ‘ಕಾಂತಾರ’ ಸಿನಿಮಾ ನೋಡದಿದ್ದರೆ ದೈವ ಶಾಪ ನೀಡುತ್ತದೆ ಎಂದು, ರಿಷಬ್ ಶೆಟ್ಟಿಯವರಲ್ಲಿ ದೈವವನ್ನು ನೋಡಿದೆ ಎಂದು ಕೂಗಾಡಿದ್ದ ಆ ವಿಡಿಯೋ ಸಹ ವೈರಲ್ ಆಗಿತ್ತು. ಇದೀಗ ಈ ಹುಚ್ಚಾಟಗಳ ಕಂಡು ಬೇಸರಗೊಂಡಿರುವ ತುಳುಕೂಟ ರಿಷಬ್ ಶೆಟ್ಟಿಯವರಿಗೆ ಖಾರವಾಗಿ ಪತ್ರ ಬರೆದಿದೆ.