ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಪರಶುರಾಮ್ ವಾಘ್ಮೋರೆ ಮತ್ತು ಮನೋಹರ್ ಯಡವೆಗೆ ವಿಶೇಷ ನ್ಯಾಯಾಲಯ ಅಕ್ಟೋಬರ್ 9ರಂದು ಜಾಮೀನು ನೀಡಿದ್ದು ಜೈಲಿನಿಂದ ಹೊರಬಂದ ಆರೋಪಿಗಳಿಗೆ ಹಿಂದೂಪರ ಸಂಘಟನೆಗಳು ಸನ್ಮಾನಿಸಿದೆ.
ಶನಿವಾರ ಸಂಜೆ ಬಿಡುಗಡೆಯಾದ ಪರಶುರಾಮ್ ಮತ್ತು ಮನೋಹರ್ ಅವರನ್ನು ಹಿಂದುತ್ವವಾದಿ ಸಂಘಟನೆಗಳ ಸದಸ್ಯರು ಸ್ವಾಗತಿಸಿ ಗೌರವಿಸಿದರು. ಅಷ್ಟೇ ಅಲ್ಲದೆ ಫ್ರಿಂಜ್ ಗ್ರೂಪ್ ಸದಸ್ಯರು ಸನಾತನ ಧರ್ಮ ಹಾಗೂ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಆರೋಪಿಗಳು ಮೊದಲಿಗೆ ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಂಡು ನಂತರ ಶಿವಾಜಿ ವೃತ್ತದಲ್ಲಿರುವ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಹಿಂದುತ್ವದ ಮುಖಂಡ ಉಮೇಶ್ ವಂದಾಲ್ ಆರೋಪಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸುತ್ತಿದ್ದು ಈ ವಿಡಿಯೋ ವೈರಲ್ ಆಗಿದೆ. ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅಮಾಯಕರಿಗೆ ಅನ್ಯಾಯವಾಗಿ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಶ್ರೀರಾಮ ಸೇನೆಯ ಇನ್ನೊಂದು ಹಿಂದುತ್ವವಾದಿ ಸಂಘಟನೆಯ ಮುಖಂಡ ನೀಲಕಂಠ ಕಂದಗಲ್ ಹೇಳಿದರು.
ಆರೋಪಿಗಳಿಗೆ ಅಪರಾಧದಲ್ಲಿ ಯಾವುದೇ ಸಂಬಂಧವಿಲ್ಲ ಎಂದು ನೀಲಕಂಠ ಕಂದಗಲ್ ಪ್ರತಿಪಾದಿಸಿದ್ದು ಕಾಂಗ್ರೆಸ್ ಸರ್ಕಾರವು ಕೇವಲ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು. ಇದೇ ವೇಳೆ ಆರೋಪಿಗಳು ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು.
ಕಳೆದ ವಾರ ಬೆಂಗಳೂರಿನ ಸೆಷನ್ಸ್ ಕೋರ್ಟ್ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂಟು ಆರೋಪಿಗಳಿಗೆ ಜಾಮೀನು ನೀಡಿತ್ತು. ಆರೋಪಿಗಳಾದ ಅಮೋಲ್ ಕಾಳೆ, ರಾಜೇಶ್ ಡಿ ಬಂಗೇರ, ವಾಸುದೇವ್ ಸೂರ್ಯವಂಶಿ, ಋಷಿಕೇಶ್ ದೇವಡೇಕರ್, ಪರಶುರಾಮ್ ವಾಘ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಮತ್ತು ಮನೋಹರ್ ಯಾದವೆ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಸೆಪ್ಟೆಂಬರ್ 4ರಂದು ಕರ್ನಾಟಕ ಹೈಕೋರ್ಟ್ ಕೂಡ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಿತ್ತು. ಜಾಮೀನು ಪಡೆದವರು ಭರತ್ ಕುರಾಣೆ, ಶ್ರೀಕಾಂತ್ ಪಂಗರ್ಕರ್, ಸುಜಿತ್ ಕುಮಾರ್ ಮತ್ತು ಸುಧನ್ವ ಗೊಂಧಲೇಕರ್.
ಹಿರಿಯ ಪತ್ರಕರ್ತೆ ಮತ್ತು ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ಅವರ ಮನೆಯ ಹೊರಗೆ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು 2017ರ ಸೆಪ್ಟೆಂಬರ್ 5ರಂದು ರಾತ್ರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿತ್ತು.
ಆರೋಪಿಗಳ ಮಾಸ್ಟರ್ ಮೈಂಡ್ ಅಮೋಲ್ ಕಾಳೆ, ಶೂಟರ್ ಪರಶುರಾಮ್ ವಾಘಮಾರೆ ಮತ್ತು ಮೋಟಾರ್ ಸೈಕಲ್ ಚಲಾಯಿಸಿದ ಗಣೇಶ್ ಮಿಸ್ಕಿನ್ ಸೇರಿದಂತೆ ಒಟ್ಟು 18 ಆರೋಪಿಗಳನ್ನು ಎಸ್ ಐಟಿ ಬಂಧಿಸಿತ್ತು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.