ಧಾರವಾಡದ ಸೆಂಟರ್ ಫಾರ್ ಮಲ್ಟಿ-ಡಿಸಿಪ್ಲಿನರಿ ಡೆವಲಪ್ಮೆಂಟ್ ರಿಸರ್ಚ್ (CMDR) ಸಂಸ್ಥೆಯು ಭಾರತ ಮತ್ತು ವಿದೇಶಗಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಇಂದಿನ ಬದುಕಿಗೆ ಭಾರತೀಯ ಜ್ಞಾನ ಪರಂಪರೆ’ (IKS 2.0) ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ಮಹಿಮಾ ಆರ್. ಕೆ. ಪ್ರಥಮ ಸ್ಥಾನ ಗಳಿಸಿದ್ದಾರೆ.
‘ಭಾರತೀಯ ಜ್ಞಾನ ಪರಂಪರೆ ಎಂಬ ಬೆಳಕ ದೀವಟಿಗೆ: ಅವಲೋಕನ’ ಎಂಬ ಶೀರ್ಷಿಕೆಯಡಿ ಮಹಿಮಾ ಅವರು ಮಂಡಿಸಿದ ಪ್ರಬಂಧವು ಒಟ್ಟು 71.33 ಅಂಕಗಳನ್ನು ಪಡೆಯುವ ಮೂಲಕ 10,000 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಏಕೈಕ ಕನ್ನಡ ಪ್ರಬಂಧ ಎಂಬ ಹೆಗ್ಗಳಿಕೆಗೆ ಈ ಬರಹ ಪಾತ್ರವಾಗಿರುವುದು ವಿಶೇಷ. ಭಾರತೀಯ ಪರಂಪರೆಯ ಜ್ಞಾನವು ಇಂದಿನ ಆಧುನಿಕ ಬದುಕಿಗೆ ಹೇಗೆ ದೀವಟಿಗೆಯಂತೆ ದಾರಿದೀಪವಾಗಿದೆ ಎಂಬುದನ್ನು ಇವರು ತಮ್ಮ ಪ್ರಬಂಧದಲ್ಲಿ ಸವಿವರವಾಗಿ ವಿಶ್ಲೇಷಿಸಿದ್ದಾರೆ. ಭಾರತೀಯ ಜ್ಞಾನ ಪರಂಪರೆಯ ಮಹತ್ವವನ್ನು ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ವಿಶ್ಲೇಷಿಸಿದ ಇವರ ಬರಹವು ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.
ವಿಟ್ಲದ ರವಿಶಂಕರ ಕುಳಮರ್ವ ಹಾಗೂ ಇತ್ತಿಚೆಗೆ ಸಾಹಿತ್ಯ ಕ್ಷೇತ್ರದ ಗಣನೀಯ ಸಾಧನೆಗಾಗಿ ಪ್ರತಿಷ್ಠಿತ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಪಡೆದ ಡಾ. ಮೈತ್ರಿ ಭಟ್ ದಂಪತಿಯ ಪುತ್ರಿಯಾಗಿರುವ ಮಹಿಮಾ, ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
























