ಪುತ್ತೂರು: ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ಸಮಾಜದ ವಿವಿಧ ಹಂತಗಳ ಮೇಲೆ ಸ್ಪಷ್ಟ ಹಾಗೂ ಸಕಾರಾತ್ಮಕ ಪ್ರಭಾವ ಬೀರಿರುವ ಬಹುಮುಖ ವ್ಯಕ್ತಿತ್ವದ ಚಿಂತನೆ ಕ್ರಿಯಾಶೀಲತೆ ಮತ್ತು ಮಾನವೀಯತೆಗಳ ಭಾವದ ಮೂಲಕ ಪುತ್ತೂರು ತಾಲೂಕಿನಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತನ್ನದೇ ಆದ ವಿಶಿಷ್ಟ ಗುರುತನ್ನ ನಿರ್ಮಿಸಿರುವ ನಿರ್ಗತಿಕರ ಆಪತ್ಬಾಂಧವ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು 2026ನೇ ಸಾಲಿನ ಪ್ರತಿಷ್ಠಿತ ‘ಸುವರ್ಣ ಕನ್ನಡಿಗ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂವರು ಆಯ್ಕೆಯಾಗಿದ್ದು, ಪುತ್ತೂರು ತಾಲೂಕಿನಿಂದ 2026ರ ಸುವರ್ಣ ಕನ್ನಡಿಗ ಪ್ರಶಸ್ತಿಗೆ ಆಯ್ಕೆ ಆಗಿರುವ ಏಕೈಕ ಸೇವಾ ಸಾಧಕರು ಇವರಾಗಿದ್ದಾರೆ.
ಮಾರ್ಚ್ 28ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು,ಸಮಾರಂಭದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದು, ಸಮಾರಂಭವು ಅತ್ಯಂತ ಗೌರವಪೂರ್ಣವಾಗಿ ನೆರವೇರಲಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದಿನಪತ್ರಿಕೆ ಸಂಯುಕ್ತವಾಗಿ ಪ್ರದಾನ ಮಾಡುವ ಈ ಪ್ರಶಸ್ತಿ, ನಾಡು, ನುಡಿ ಹಾಗೂ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಸಾಧಕರಿಗೆ ನೀಡಲಾಗುವ ಅತ್ಯಂತ ಮಾನ್ಯತೆಯ ಗೌರವಗಳಲ್ಲಿ ಒಂದಾಗಿದೆ.
ಪುತ್ತೂರು ಉಮೇಶ್ ನಾಯಕ್ ಅವರು ಕಳೆದ ನಾಲ್ಕು ವರ್ಷಗಳಿಂದ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ 32 ಗ್ರಾಮಗಳಲ್ಲಿ “ಗ್ರಾಮ ಸಾಹಿತ್ಯ ಸಂಭ್ರಮ” ಎಂಬ ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವನ್ನು ಗ್ರಾಮ ಗ್ರಾಮದಲ್ಲೂ ನಡೆಸಿ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿದ್ದಾರೆ. ವಿವಿಧ ಗ್ರಾಮದ 250ಕ್ಕೂ ಅಧಿಕ ಸಾಧಕರನ್ನು ಗುರುತಿಸಿ ಗೌರವಿಸಿರುವುದಲ್ಲದೆ, 100ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆಗೆ ಮಾರ್ಗದರ್ಶನ ನೀಡಿರುವುದು ಅವರ ಸಾಹಿತ್ಯಪ್ರೇಮ ಹಾಗೂ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
“ಶಾಸನ ಸಂಶೋಧನಾ ಅಧ್ಯಯನ” ಎಂಬ ಘೋಷವಾಕ್ಯದಡಿ ಪ್ರಾಚೀನ ಶಾಸನಗಳ ಸಂರಕ್ಷಣೆ ಹಾಗೂ ಪುನರುಜ್ಜೀವನ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರು, ಪುತ್ತೂರಿನಲ್ಲಿ ಸುಮಾರು ಎರಡು ದಶಕಗಳಿಂದ ಸ್ಥಗಿತಗೊಂಡಿದ್ದ ಕನ್ನಡ ಭುವನೇಶ್ವರಿ ರಾಜ್ಯೋತ್ಸವ ಮೆರವಣಿಗೆಯನ್ನು ಪುನಃ ಪ್ರಾರಂಭಿಸಿ, ತಾಲೂಕು ಮಟ್ಟದಲ್ಲಿ “ರಾಜ್ಯೋತ್ಸವ ಪ್ರಶಸ್ತಿ” ವ್ಯವಸ್ಥೆಯನ್ನು ರೂಪಿಸಿದ ಪ್ರಮುಖ ವ್ಯಕ್ತಿಯಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿಯೂ ಅವರು ವಿಶಿಷ್ಟ ಸಾಧನೆ ಮಾಡಿದ್ದು, “ಕನ್ನಡದಲ್ಲೂ ಐಎಎಸ್ ಪರೀಕ್ಷೆ ಬರೆಯಿರಿ” ಎಂಬ ಅಭಿಯಾನದಡಿ 200ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರಗಳನ್ನು ಕನ್ನಡದಲ್ಲೇ ನಡೆಸಿ, ಸುಮಾರು 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಐಎಎಸ್ ದಿಕ್ಕಿನತ್ತ ಪ್ರೇರಣೆ ನೀಡಿರುವುದು ಗಮನಾರ್ಹವಾಗಿದೆ. ಒಟ್ಟಾರೆಯಾಗಿ ರಾಜ್ಯದ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಈ ರೀತಿಯ ವಿನೂತನ ಕಾರ್ಯಕ್ರಮಗಳು ಹಾಗೂ ಪ್ರಯೋಗಗಳು ಪ್ರಪ್ರಥಮ ಎನ್ನುಬಹುದಾಗಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಸಾಧಕ ಲೇಖಕರಾಗಿಯೂ ಗುರುತಿಸಿಕೊಂಡಿರುವ ಅವರು, ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಪ್ರಕಟಿತ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳ ಪುರಾಣದ ಸಂಕ್ಷಿಪ್ತ ಸಂಗ್ರಹವಾದ “ಸ್ವಯಂಭೂ ಮಹಾಲಿಂಗೇಶ್ವರ” ಸೇರಿದಂತೆ ಮೂರು ಕೃತಿಗಳನ್ನು ರಚಿಸಿದ್ದಾರೆ.
ಮಾನವೀಯ ಸೇವೆಯಲ್ಲಿ ಕೂಡ ಅವರು ಅನನ್ಯ ಸೇವೆ ಸಲ್ಲಿಸಿದ್ದು, ಕಳೆದ ಹತ್ತು ವರ್ಷಗಳಲ್ಲಿ 100ಕ್ಕೂ ಹೆಚ್ಚು ನಿರ್ಗತಿಕರನ್ನು ಪುನರ್ವಸತಿ ಕೇಂದ್ರಗಳಿಗೆ ಸೇರಿಸಿ, ಅವರಿಗೆ ಹೊಸ ಬದುಕಿನ ಆಶಾಕಿರಣವಾಗಿದ್ದಾರೆ. ವಿಶೇಷವಾಗಿ ಎಚ್.ಐ.ವಿ ಪೀಡಿತ ಓರ್ವ ಮಹಿಳೆ ಹಾಗೂ ಇಬ್ಬರು ಎಚ್. ಐ. ವಿ ಪೀಡಿತ ಮಕ್ಕಳ ರಕ್ಷಣೆ ಮಾಡಿ ಅವರಿಗೆ ಆಶ್ರಯ, ಚಿಕಿತ್ಸೆ ಮತ್ತು ವಿದ್ಯಾಭ್ಯಾಸ ಒದಗಿಸಿರುವುದು ಅವರ ಮಾನವೀಯತೆಯ ಉನ್ನತ ಉದಾಹರಣೆಯಾಗಿದೆ.
ತಮ್ಮ ಡೌನ್ ಸಿಂಡ್ರೋಮ್(ಬುದ್ದಿ ಮಾಂದ್ಯತೆ ) ಪೀಡಿತ ಸಹೋದರ ಸುರೇಶ್ ನಾಯಕ್ ಅವರಿಗೆ ಜಾದು ಕಲಿಸಿ ದೇಶದಾದ್ಯಂತ 500ಕ್ಕೂ ಹೆಚ್ಚು ಉಚಿತ ಪ್ರದರ್ಶನಗಳ ಮೂಲಕ ಬುದ್ಧಿಮಾಂದ್ಯತಾ ಹಾಗೂ ಸ್ವಚ್ಛ ಭಾರತ್ ಜನ ಜಾಗೃತಿ ಮೂಡಿಸಿ ಉಭಯ ಅಭಿಯಾನಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಈ ಪ್ರಯತ್ನಗಳಿಂದ ಸುರೇಶ್ ನಾಯಕ್ ಲಿಮ್ಕಾ ದಾಖಲೆ ಸೇರಿದಂತೆ ಎಂಟು ವಿಶ್ವ ದಾಖಲೆಗಳನ್ನು ಸಾಧಿಸಿ, 2014ರ ವಿಶ್ವ ಅಂಗವಿಕಲ ದಿನಾಚರಣೆಯಂದು ರಾಷ್ಟ್ರಪತಿ ಪ್ರಶಸ್ತಿ ಪಡೆದಿದ್ದಾರೆ.
ಅದೇ ರೀತಿ, ಉಡುಪಿಯ ಡೌನ್ ಸಿಂಡ್ರೋಮ್ ಅಂತರಾಷ್ಟ್ರೀಯ ಈಜುಗಾರ್ತಿ ಅರ್ಚನಾ ಜೈ ವಿಠಲ್ ಹಾಗೂ ಮೈಸೂರಿನ ದಿವ್ಯಾಂಗ ಕೀಬೋರ್ಡ್ ವಾದಕ ಗಣೇಶ ಭಟ್ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ದೊರಕಲು ಕೂಡ ಅವರು ಪ್ರಮುಖ ಪಾತ್ರವಹಿಸಿದ್ದು, ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹಾಗೂ ಗೌರವದ ಜೀವನ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
ಇವರ ಸೇವೆಯನ್ನು ಗುರುತಿಸಿ 2020ರಲ್ಲಿ “ರೋಟರಿ ಅನ್ಸಂಗ್ ಹೀರೋ ಪ್ರಶಸ್ತಿ” ಹಾಗೂ 2025ರಲ್ಲಿ “ಪುತ್ತೂರು ತಾಲೂಕು ಗಣರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
ಪ್ರಸ್ತುತ “ಶ್ರೀರಾಮ್ ಶೇರ್ಸ್ ಅಂಡ್ ಫೈನಾನ್ಷಿಯಲ್ ಕನ್ಸಲ್ಟೆಂಟ್” ಸಂಸ್ಥೆಯ ಮೂಲಕ ವೃತ್ತಿಜೀವನ ನಡೆಸುತ್ತಿರುವ ಅವರು, ಪತ್ನಿ ರೂಪಶ್ರೀ ನಾಯಕ್, ಪುತ್ರ ಸಾತ್ವಿಕ್ ನಾಯಕ್ ಹಾಗೂ ಪೋಷಕರೊಂದಿಗೆ ಪುತ್ತೂರಿನಲ್ಲಿ ವಾಸವಾಗಿದ್ದಾರೆ.
‘ಸುವರ್ಣ ಕನ್ನಡಿಗ’ ಪ್ರಶಸ್ತಿ ಇವರಂತಹ ಬಹುಮುಖ ಸೇವಾ ಸಾಧಕರಿಗೆ ಲಭಿಸಿರುವುದು ಪುತ್ತೂರು ತಾಲೂಕು ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದ್ದು, ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿವೆ.
























