ಬೆಂಗಳೂರು: ಭೀಕರ ಸಿಲಿಂಡರ್ ಸ್ಪೋಟಗೊಂಡು ಹತ್ತು ಮನೆಗಳು ಛಿದ್ರಗೊಂಡಿದ್ದು, ಬಾಲಕನೊಬ್ಬ ಮೃತಪಟ್ಟು, ಏಳು ಜನ ಗಂಭೀರ ಗಾಯಗೊಂಡ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ಆ.15ರ ಶುಕ್ರವಾರ ನಡೆದಿದೆ.
ತಿಮ್ಮರಾಜು ಎಂಬವರಿಗೆ ಸೇರಿದ ಮನೆಯಲ್ಲಿ ಘಟನೆ ನಡೆದಿದ್ದು, ಈ ಪರಿಣಾಮ 10 ಕ್ಕೂ ಹೆಚ್ಚು ಮನೆಗಳು ಛಿದ್ರಗೊಂಡಿದೆ ಎಂದು ತಿಳಿದು ಬಂದಿದೆ. ಹಲವರು ಕಟ್ಟಡ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳದಲ್ಲಿ ಎನ್.ಡಿ.ಆರ್.ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಘಟನೆಯಲ್ಲಿ ಮುಬಾರಕ್ ಎಂಬ ಬಾಲಕ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಹಲವರು ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ. ಕಸ್ತೂರಿ, ನರಸಮ್ಮ, ಸಬ್ರಿನ್ ಬಾನು, ಫಾತೀಮಾ ಸೇರಿದಂತೆ ಹಲವರಿಗೆ ಗಾಯಗಳಾಗಿವೆ.
ಇದು ಸಿಲಿಂಡರ್ ಸ್ಫೋಟದಿಂದ ಸಂಭವಿಸಿದ ಅವಘಡವೇ ಅಥವಾ ಇನ್ನಾವುದಾದರು ಸ್ಫೋಟದಿಂದ ಸಂಭವಿಸಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ನಷ್ಟೇ ನಿಖರ ಕಾರಣ ತಿಳಿದು ಬರಬೇಕಾಗಿದೆ.