ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಕೀಲರ ನೇಮಿಸಿಕೊಳ್ಳಲು ತಾಯಿ – ಮಗ ಕೋರ್ಟ್ ಮುಂದೆ ಪರಿ ಪರಿಯಾಗಿ ಬೇಡಿಕೊಂಡ ಘಟನೆ ನಡೆಯಿತು.
ಕೇಸ್ನಿಂದ ವಕೀಲ ಜಿ. ಅರುಣ್ ನಿವೃತ್ತಿ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಹೊಸ ವಕೀಲರ ನೇಮಿಸಿಕೊಳ್ಳಲು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಾಲಾವಕಾಶ ಕೇಳಿದರು. ಆದ್ರೆ, ಇದಕ್ಕೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿರಾಕರಿಸಿದೆ. ಆದರೂ ವಕೀಲರನ್ನು ನೇಮಿಸಲು ಕಾಲಾವಕಾಶ ನೀಡಬೇಕೆಂದು ಪುತ್ರನ ಪರವಾಗಿ ಮನವಿ ಮಾಡಲು ಬಂದ ಭವಾನಿ ರೇವಣ್ಣಗೆ ಕೋರ್ಟ್ ಅವಕಾಶ ನೀಡಿಲ್ಲ. ವಕೀಲರ ನೇಮಿಸಿಕೊಳ್ಳಲು ನಾಳೆವರೆಗೆ (ಏಪ್ರಿಲ್ 29) ಕೊನೆಯ ಅವಕಾಶ ನೀಡುತ್ತೇನೆ. ನೀವು ಕೇಳಿದಷ್ಟು ಸಮಯ ನೀಡಲಾಗುವುದಿಲ್ಲ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ಜಡ್ಜ್ ಸಂತೋಷ್ ಗಜಾನನ ಭಟ್ ಖಡಕ್ ಆಗಿ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆಯಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಅವರನ್ನು ಬದಲಿಸುವಂತೆ ಪ್ರಜ್ವಲ್ ಪರ ವಕೀಲರು ಕೋರಿದ್ದ ಜ್ಞಾಪನಾ ಪತ್ರ (ಮೆಮೋ)ವನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಬುಧವಾರ ತಿರಸ್ಕರಿಸಿದ್ದರು. ಈ ಬೆನ್ನಲ್ಲೇ ಪ್ರಜ್ವಲ್ ಪರ ವಕೀಲ ಜಿ. ಅರುಣ್ ಅವರು ವಕಾಲತ್ತಿನಿಂದ ನಿವೃತ್ತಿ ಹೊಂದಿ ನ್ಯಾಯಾಧೀಶರಿಗೆ ಮೆಮೋ ಸಲ್ಲಿಸಿದ್ದರು. ಹೀಗಾಗಿ ಬೇರೆ ವಕೀಲರನ್ನು ನೇಮಿಸಿಕೊಳ್ಳಲು ಸಮಯ ನೀಡುವಂತೆ ಪ್ರಜ್ವಲ್ ರೇವಣ್ಣ ಅವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಮನವಿ ಮಾಡಿದ್ದಾರೆ. ಆದ್ರೆ, ಇದಕ್ಕೆ ಕೋರ್ಟ್ ಅವಕಾಶ ನೀಡಿಲ್ಲ. ನಾಳೆ ವೇಳೆಗೆ ವಕೀಲರನ್ನು ನೇಮಿಸಿಕೊಳ್ಳಬೇಕೆಂದು ನ್ಯಾಯಧೀಶ ಸಂತೋಷ್ ಗಜಾನನ ಭಟ್ ಸೂಚಿಸಿದ್ದಾರೆ.
ಟ್ರಯಲ್ ನಿಗದಿ ಮಾಡುವುದಾಗಿ ಜಡ್ಜ್ ಹೇಳಿದಾಗ ವಕೀಲರನ್ನು ನೇಮಿಸಲು ಕಾಲಾವಕಾಶ ನಿಡುವಂತೆ ಪ್ರಜ್ವಲ್ ರೇವಣ್ಣ ಅವರು ಮತ್ತೆ ಮನವಿ ಮಾಡಿದರು. ದಯವಿಟ್ಟು ಮೇ 2ರ ವರೆಗಾದರೂ ಸಮಯ ಕೊಡಿ ಎಂದು ಅಂಗಲಾಚಿದರು. ನಮ್ಮ ತಾಯಿಯವರು ವಕೀಲರ ನೇಮಿಸಲು ಯತ್ನಿಸುತ್ತಿದ್ದಾರೆ ಎಂದರು. ಇದಕ್ಕೆ ಗರಂ ಆದ ಜಡ್ಜ್ ಸಂತೋಷ್ ಗಜಾನನ ಭಟ್, ನೀವು ಕೇಳಿದಷ್ಟು ಸಮಯ ನೀಡಲಾಗುವುದಿಲ್ಲ.
ಈ ವೇಳೆ ಭವಾನಿ ರೇವಣ್ಣ ಅವರು ಮತ್ತೆ ಮನವಿ ಮಾಡಲು ಮುಂದಾದರು. ಆದ್ರೆ, ಇದಕ್ಕೆ ಕೋರ್ಟ್, ಅವಕಾಶ ನೀಡಿಲ್ಲ. ಇದರಿಂದ ಭವಾನಿ ರೇವಣ್ಣ ಕೋರ್ಟ್ ಹಾಲ್‌ನಿಂದ ಹೊರನಡೆದರು. ಬಳಿಕ ಕೋರ್ಟ್, ವಿಚಾರಣೆಯನ್ನು ನಾಳೆಗೆ ಮುಂದೂಡಿತು.
ಇನ್ನು ಕೋರ್ಟ್ ಹಾಲ್ನಲ್ಲಿ ಪ್ರಜ್ವಲ್ ರೇವಣ್ಣನನ್ನು ನೋಡಿ ತಾಯಿ ಭವಾನಿ ಕಣ್ಣು ಒರೆಸಿಕೊಂಡು ಕೈಕಟ್ಟಿ ನಿಂತುಕೊಂಡಿದ್ದರು.