ಹಾಸನ: ಬೇಲೂರು ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಕಾಡಾನೆಗಳು ಬರೋಬ್ಬರಿ 60 ಕ್ವಿಂಟಾಲ್ ಭತ್ತವನ್ನು ತಿಂದು ಹಾಕಿರುವ ಘಟನೆ ನಡೆದಿದೆ.
ಗ್ರಾಮದ ಮನು, ಹೂವೇಗೌಡ, ಹಾಲೇಗೌಡ, ಹಿರಿಗೌಡ, ಶರತ್ ಹಾಗೂ ರಮೇಶ್ ಸೇರಿದಂತೆ 8 ಜನ ರೈತರಿಗೆ ಸೇರಿದ ಭತ್ತ ಆನೆಗಳಿಗೆ ಆಹಾರವಾಗಿದೆ. ಭತ್ತ ಕಟಾವು ಮಾಡಿ ಟ್ರ್ಯಾಕ್ಟರ್ ಮೂಲಕ ಸಾಗಿಸಲು ಗೋಣಿಗಳಲ್ಲಿ ಭತ್ತ ತುಂಬಿಸಿಡಲಾಗಿತ್ತು. ತಡ ರಾತ್ರಿ ದಾಳಿ ಮಾಡಿದ ಕಾಡಾನೆಗಳು ಭತ್ತವನ್ನು ತಿಂದು ತೇಗಿವೆ.
ರೈತರಿಗೆ ಅಂದಾಜು 3 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಇನ್ನೇನು ಕೈಸೇರಬೇಕು ಅನ್ನೋವಷ್ಟರಲ್ಲಿ ಆನೆಗಳಿಗೆ ಆಹಾರವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕದ ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬೆಳೆ ನಾಶದಿಂದ ಆದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು, ಸ್ಥಳೀಯರು ಒತ್ತಾಯಿಸಿದ್ದಾರೆ.